ನವದೆಹಲಿ: ಈಗಿನ ಹಣಕಾಸು ಸಚಿವರು ನಾಲ್ಕು ದಶಕಗಳಲ್ಲಿ ಇದೇ ಮೊದಲ ಬಾರಿಗೆ ಆರ್ಥಿಕ ಹಿಂಜರಿತದ ನಾಯಕತ್ವ ಹೊರಲಿದ್ದಾರೆ ಎಂದು ಮಾಜಿ ಹಣಕಾಸು ಸಚಿವ ಹಾಗೂ ಕಾಂಗ್ರೆಸ್ನ ಹಿರಿಯ ನಾಯಕ ಪಿ.ಚಿದಂಬರಂ ಹೇಳಿದ್ದಾರೆ.
ಕಾಂಗ್ರೆಸ್ ಹಿರಿಯ ಮುಖಂಡರಾದ ಜೈರಾಮ್ ರಮೇಶ್ ಮತ್ತು ಮಲ್ಲಿಕಾರ್ಜುನ್ ಖರ್ಗೆ ಅವರೊಂದಿಗೆ ಪ್ರಸ್ತುತ ಆರ್ಥಿಕ ಪರಿಸ್ಥಿತಿ ಮತ್ತು ಬಜೆಟ್‌ನಿಂದ ಪಕ್ಷದ ನಿರೀಕ್ಷೆಗಳ ಕುರಿತು ಮಾಧ್ಯಮಗಳನ್ನು ಉದ್ದೇಶಿಸಿ ಚಿದಂಬರಂ ಮಾತನಾಡಿದರು.
ಈ ಸರ್ಕಾರವು ಅಸಾಧಾರಣವಾದ ಹಠಮಾರಿ ಧೋರಣೆ ಹೊಂದಿದೆ. ಉತ್ತಮ ಸಲಹೆಗಳನ್ನು ತೆಗೆದುಕೊಳ್ಳುವುದಿಲ್ಲ. ಆರ್ಥಿಕ ನೀತಿಗಳ ದುರಂತ ಪರಿಣಾಮಗಳ ಬಗ್ಗೆ ಕಾಳಜಿಯಿಲ್ಲ ಎಂಬುದು ನಮಗೆ ತಿಳಿದಿದೆ ಎಂದರು.
ಸಾಂಕ್ರಾಮಿಕ ರೋಗ ಇಲ್ಲದಿದ್ದರೂ ಸಹ ಆರ್ಥಿಕತೆಯು 2018-19ರ ಮೊದಲ ತ್ರೈಮಾಸಿಕದಲ್ಲಿ ಪ್ರಾರಂಭವಾದ ಕೆಳಮುಖ ಹಾದಿಯಲ್ಲಿ ಮುಂದುವರಿಯುತ್ತಿತ್ತು. ಅಭಿವೃದ್ಧಿ ದರ ಸತತ ಎಂಟು ತ್ರೈಮಾಸಿಕಗಳವರೆಗೆ ಇಳಿಕೆ ಆಗಲಿತ್ತು. ಸಾಂಕ್ರಾಮಿಕವು ಆರ್ಥಿಕತೆಯನ್ನು ಪ್ರಪಾತಕ್ಕೆ ತಳ್ಳಿ 2020-21ರ ಮೊದಲನೇ ತ್ರೈಮಾಸಿಕದಲ್ಲಿ ಮೈನಸ್ 23.9ಕ್ಕೆ ಮತ್ತ 2ನೇ ತ್ರೈಮಾಸಿಕದಲ್ಲಿ ಮೈನಸ್ 7.5ರಷ್ಟಕ್ಕೆ ಕುಸಿದೆ ಎಂದು ಹೇಳಿದರು.
ಪ್ರಸ್ತುತ ಹಣಕಾಸು ಸಚಿವರು ನಾಲ್ಕು ದಶಕಗಳಲ್ಲಿ ಮೊದಲ ಆರ್ಥಿಕ ಹಿಂಜರಿತದ ನೇತೃತ್ವದ ಭಾರ ಹೊರಲಿದ್ದಾರೆ. 2020-21 ವರ್ಷವು ನಕಾರಾತ್ಮಕ ಬೆಳವಣಿಗೆಯೊಂದಿಗೆ ಕೊನೆಗೊಳ್ಳುತ್ತದೆ. ವರ್ಷದ ಆರಂಭದಲ್ಲಿ ಅಂದಾಜು ಮಾಡಲಾದ ಯಾವುದೇ ಸಂಖ್ಯೆಗಳ ಬೆಳವಣಿಗೆ ಸಾಧಿಸಲಾಗುವುದಿಲ್ಲ ಎಂದರು.
ಇದನ್ನೂ ಓದಿ: ಬಜೆಟ್ಗೂ ಮುನ್ನ ಷೇರು ಮಾರುಕಟ್ಟೆಯಲ್ಲಿ ರಕ್ತಪಾತ: 3,000 ಅಂಕ ಪತನ
ಹಣಕಾಸು ಸಚಿವರು 2020-21ರಲ್ಲಿನ ಪರಿಷ್ಕೃತ ಅಂದಾಜುಗಳನ್ನು ಪ್ರಸ್ತುತಪಡಿಸುತ್ತಾರೆ. 2021-22ರಲ್ಲಿ ಆಕರ್ಷಕ ನಿರೂಪಣೆ ಮಾಡಲು ಪ್ರಯತ್ನಿಸುತ್ತಾರೆ ಎಂಬ ಬಗ್ಗೆ ನಮಗೆ ಭಯವಿದೆ. 2020-21ರ ಪರಿಷ್ಕೃತ ಅಂದಾಜುಗಳು ಸುಳ್ಳು ಅಂಕಿಸಂಖ್ಯೆಗಳ ಮೊತ್ತವಾಗಿವೆ. ಆದ್ದರಿಂದ 2021-22ರ ಬಜೆಟ್ ಅಂದಾಜು ಯಕ್ಷಿಣಿಯ ಭ್ರಮೆಯಾಗಿ ಇರಲಿದೆ ಎಂದು ಲೇವಡಿ ಮಾಡಿದರು.
ಮುಚ್ಚಿದ ಘಟಕಗಳ ಪುನರುಜ್ಜೀವನಗೊಳಿಸಲು, ಕಳೆದುಹೋದ ಉದ್ಯೋಗಗಳನ್ನು ಚೇತರಿಸಿಕೊಳ್ಳಲು, ಶಿಕ್ಷಣ ಮತ್ತು ಕೌಶಲ್ಯ ಹೊಂದಿರುವವರಿಗೆ ಹೊಸ ಉದ್ಯೋಗಗಳನ್ನು ಸೃಷ್ಟಿಸಲು ಎಂಎಸ್‌ಎಂಇಗಳಿಗೆ ರಕ್ಷಣಾ ಯೋಜನೆ ರೂಪಿಸಬೇಕು. ಪೆಟ್ರೋಲ್ ಮತ್ತು ಡೀಸೆಲ್ ಸೇರಿದಂತೆ ಇತರೆ ವಸ್ತುಗಳ ಮೇಲಿನ ತೆರಿಗೆ ತಗ್ಗಿಸುವಂತೆ ಕೇಂದ್ರವನ್ನು ಚಿದಂಬರಂ ಒತ್ತಾಯಿಸಿದರು.