ನವದೆಹಲಿ : ಕೇಂದ್ರವು ತನ್ನ ಹೂಡಿಕೆಯ ಯೋಜನೆಗಳನ್ನು ವಿಸ್ತರಿಸಲು ಚಿಂತಿಸುತ್ತಿದೆ. ಬ್ಯಾಂಕಿಂಗ್ ಮತ್ತು ವಿಮಾ ಕ್ಷೇತ್ರಗಳನ್ನು ಹೊಸ ಹೂಡಿಕೆ ನೀತಿ ವ್ಯಾಪ್ತಿಗೆ ತರಲು ಯೋಜನೆ ರೂಪಿಸುತ್ತಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.
ಹೊಸ ಹೂಡಿಕೆ ಅಥವಾ ಖಾಸಗೀಕರಣ ನೀತಿ ತಯಾರಿಕೆ ಕಾರ್ಯ ತೆರೆಮರೆಯಲ್ಲಿ ನಡೆಯುತ್ತಿದೆ. ಇದಕ್ಕಾಗಿ ಕರಡು ಕ್ಯಾಬಿನೆಟ್ ಟಿಪ್ಪಣಿಯೊಂದನ್ನು ಸಿದ್ಧಪಡಿಸುತ್ತಿದ್ದಾರೆ ಎಂದು ಬಲ್ಲ ಮೂಲಗಳು ತಿಳಿಸಿವೆ.
ಪ್ರಧಾನ ಮಂತ್ರಿಗಳ ಕಚೇರಿ (ಪಿಎಂಒ), ಹಣಕಾಸು ಸಚಿವಾಲಯ ಮತ್ತು ನೀತಿ ಆಯೋಗ ಈಗಾಗಲೇ ವಿಮಾ ವಲಯವನ್ನು ಆಯಕಟ್ಟಿನ ಹೂಡಿಕೆಗಾಗಿ ಸೇರ್ಪಡೆಗೊಳಿಸುವ ಬಗ್ಗೆ ಚರ್ಚಿಸಿದ್ದು, ಬ್ಯಾಂಕಿಂಗ್ ಕ್ಷೇತ್ರದ ಬಗ್ಗೆ ಬಳಿಕ ನಿರ್ಧಾರ ತೆಗೆದುಕೊಳ್ಳುವ ಸಾಧ್ಯತೆಯಿದೆ.
ವಿಮಾ ಕಂಪನಿಗಳಲ್ಲಿ ಭಾರತೀಯ ಜೀವ ವಿಮಾ ನಿಗಮವು ಈ ಹೂಡಿಕೆ ಪ್ರಕ್ರಿಯೆಯಲ್ಲಿ ಭಾಗವಾಗಿರುವುದಿಲ್ಲ. ಆರು ಸಾಮಾನ್ಯ ವಿಮಾ ಕಂಪನಿಗಳು ಮತ್ತು ಒಂದು ಮರುವಿಮೆ ಕಂಪನಿ ಸೇರಿದಂತೆ ಒಟ್ಟು ಎಂಟು ವಿಮಾ ಕಂಪನಿಗಳು ಇರಲಿವೆ.
ಈ ತಿಂಗಳ ಆರಂಭದಲ್ಲಿ ಕೇಂದ್ರೀಯ ಕ್ಯಾಬಿನೆಟ್, ಮೂರು ಸರ್ಕಾರಿ ವಿಮಾ ಕಂಪನಿಗಳಾದ ಓರಿಯಂಟಲ್ ಇನ್ಶುರೆನ್ಸ್ ಕಂಪನಿ, ನ್ಯಾಷನಲ್ ವಿಮಾ ಕಂಪನಿ ಮತ್ತು ಯುನೈಟೆಡ್ ಇಂಡಿಯಾ ವಿಮಾ ಕಂಪನಿಗಳಿಗೆ 12,450 ಕೋಟಿ ರೂ. ಫಂಡ್ ನೀಡಲು ಅನುಮೋದನೆ ನೀಡಿತ್ತು.
ಏಪ್ರಿಲ್ 1ರಿಂದ 10 ಸಾರ್ವಜನಿಕ ವಲಯದ ಬ್ಯಾಂಕ್ಗಳ ವಿಲೀನ ಜಾರಿಗೆ ಬಂದ ಕೆಲವೇ ತಿಂಗಳಲ್ಲಿ ಬ್ಯಾಂಕ್ಗಳಲ್ಲಿನ ಷೇರು ಮಾರಾಟದ ಮಾತುಕತೆ ಕುತೂಹಲಕಾರಿಯಾಗಿದೆ. ವಿಲೀನ ಜಾರಿಗೆ ಬರುತ್ತಿರುವುದರಿಂದ ಭಾರತವು ಪ್ರಸ್ತುತ 12 ಸಾರ್ವಜನಿಕ ವಲಯದ ಬ್ಯಾಂಕ್ಗಳನ್ನು ಹೊಂದಿದ್ದು, 2017ರಲ್ಲಿ 27 ಬ್ಯಾಂಕ್ಗಳಿದ್ದವು.