ನವದೆಹಲಿ: ಸಾಮಾನ್ಯ ಅರ್ಹತಾ ಪರೀಕ್ಷೆ ನಡೆಸಲು 'ರಾಷ್ಟ್ರೀಯ ನೇಮಕ ಸಂಸ್ಥೆ' ಸ್ಥಾಪಿಸಲು ಕ್ಯಾಬಿನೆಟ್ ಅನುಮೋದನೆ ನೀಡಿದೆ.
ಗೆಜೆಟೆಡ್ ಅಲ್ಲದ ಎಲ್ಲ ಹುದ್ದೆಗಳಿಗೆ ಒಂದೇ ಪ್ರವೇಶ ಪರೀಕ್ಷೆ ಇರುತ್ತದೆ. ಗ್ರೂಪ್ 'ಬಿ' ಮತ್ತು 'ಸಿ' ಹುದ್ದೆಗಳಿಗೆ ಅನ್ವಯಿಸಲಿದೆ. ಈ ಸಾಮಾನ್ಯ ಪ್ರವೇಶ ಪರೀಕ್ಷೆಗೆ (ಸಿಇಟಿ) ಅರ್ಹತೆ ಪಡೆದ ಅಭ್ಯರ್ಥಿಗಳು ಯಾವುದೇ ನೇಮಕಾತಿ ಸಂಸ್ಥೆಗಳಿಗೆ ಉನ್ನತ ಮಟ್ಟದ ಪರೀಕ್ಷೆಗೆ ಅರ್ಜಿ ಸಲ್ಲಿಸಬಹುದು. ಪಡೆದ ಅಂಕಗಳು ಮೂರು ವರ್ಷಗಳವರೆಗೆ ಮಾನ್ಯವಾಗಿರುತ್ತದೆ, ಈ ಸಮಯದಲ್ಲಿ ಅಭ್ಯರ್ಥಿಯು ಅವನ / ಅವಳ ಯೋಗ್ಯತೆ ಮತ್ತು ಆದ್ಯತೆಗಳನ್ನು ಅವಲಂಬಿಸಿ ವಿವಿಧ ಕ್ಷೇತ್ರಗಳಲ್ಲಿನ ಉದ್ಯೋಗಗಳಿಗೆ ಅರ್ಜಿ ಸಲ್ಲಿಸಬಹುದು. ಪ್ರಯತ್ನಗಳಿಗೆ ಯಾವುದೇ ನಿರ್ಬಂಧವಿರುವುದಿಲ್ಲ.
ಸಚಿವ ಸಂಪುಟದ ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಕೇಂದ್ರ ಸಚಿವ ಪ್ರಕಾಶ್ ಜಾವಡೇಕರ್, ಕೇಂದ್ರ ಸರ್ಕಾರದ ಉದ್ಯೋಗಗಳಿಗೆ ಕಂಪ್ಯೂಟರ್ ಆಧಾರಿತ ಸಾಮಾನ್ಯ ಅರ್ಹತಾ ಪರೀಕ್ಷೆಯನ್ನು ನಡೆಸಲಿರುವ ರಾಷ್ಟ್ರೀಯ ನೇಮಕಾತಿ ಸಂಸ್ಥೆ (ಎನ್‌ಆರ್‌ಎ) ರಚನೆಗೆ ಪ್ರಧಾನಿ ಮೋದಿ ಅವರ ಅಧ್ಯಕ್ಷತೆಯಲ್ಲಿ ಕೇಂದ್ರ ಸಚಿವ ಸಂಪುಟ ಅನುಮೋದನೆ ನೀಡಿದೆ. ಈ ನಿರ್ಧಾರವು ಉದ್ಯೋಗ ಹುಡುಕುತ್ತಿರುವ ಯುವಕರಿಗೆ ಪ್ರಯೋಜನ ನೀಡುತ್ತದೆ ಎಂದರು.
ಸರ್ಕಾರದ ವಿವಿಧ ಹುದ್ದೆಗಳಿಗೆ ಪ್ರಾಥಮಿಕ ಆಯ್ಕೆಗಾಗಿ ಸಾಮಾನ್ಯ ಅರ್ಹತಾ ಪರೀಕ್ಷೆ (ಸಿಇಟಿ) ನಡೆಸಲು ರಾಷ್ಟ್ರೀಯ ನೇಮಕಾತಿ ಸಂಸ್ಥೆ (ಎನ್‌ಆರ್‌ಎ) ಸ್ಥಾಪಿಸಲು ಕ್ಯಾಬಿನೆಟ್ ನಿರ್ಧಾರವು ಒಂದು ಕ್ರಾಂತಿಕಾರಿ ಸುಧಾರಣೆಯಾಗಿದೆ. ಇದರಿಂದ ನೇಮಕಾತಿಯ ಆಯ್ಕೆ ಸುಲಭವಾಗಲಿದೆ ಮತ್ತು ಆ ಮೂಲಕ ಆಕಾಂಕ್ಷಿ ಅಭ್ಯರ್ಥಿಗಳಿಗೆ ಜೀವನ ಸುಧಾರಿಸಲಿದೆ ಎಂದು ಕೇಂದ್ರ ಸಚಿವ ಜಿತೇಂದ್ರ ಸಿಂಗ್ ಹೇಳಿದ್ದಾರೆ.
ಕೇಂದ್ರ ಸರ್ಕಾರದಲ್ಲಿ ಸುಮಾರು 20ಕ್ಕೂ ಹೆಚ್ಚು ನೇಮಕಾತಿ ಏಜೆನ್ಸಿಗಳಿವೆ. ನಾವು ಈಗ ಕೇವಲ ಮೂರು ಏಜೆನ್ಸಿಗಳ ಒಳಗೆ ಪರೀಕ್ಷೆಗಳನ್ನು ನಡೆಸಲು ಸಾಮಾನ್ಯವಾಗಿಸುತ್ತಿದ್ದೇವೆ. ಕಾಲಕ್ರಮೇಣ ಇದರಿಂದ ಎಲ್ಲ ನೇಮಕ ಏಜೆನ್ಸಿಗಳಿಗೆ ಸಾಮಾನ್ಯ ಅರ್ಹತಾ ಪರೀಕ್ಷೆಯನ್ನು ನಡೆಸಲು ಸಾಧ್ಯವಾಗುತ್ತದೆ ಎಂದು ಸರ್ಕಾರದ ಕಾರ್ಯದರ್ಶಿ ಸಿ ಚಂದ್ರಮೌಳಿ ಕ್ಯಾಬಿನೆಟ್ ಸಭೆಯಲ್ಲಿ ಹೇಳಿದರು.
ರಾಷ್ಟ್ರೀಯ ನೇಮಕಾತಿ ಸಂಸ್ಥೆಯನ್ನು (ಎನ್‌ಆರ್‌ಎ) ಕೇಂದ್ರ ಸರ್ಕಾರವು ಕೇಂದ್ರ ಬಜೆಟ್ 2020ರಲ್ಲಿ ಮೊದಲು ಪ್ರಸ್ತಾಪಿಸಿತು. ಎಲ್ಲ ಗೆಜೆಟೆಡ್ ಅಲ್ಲದ ಹುದ್ದೆಗಳಿಗೆ ಪ್ರಾಥಮಿಕ ಪರೀಕ್ಷೆ ಸಾಮಾನ್ಯವಾಗಿ ನಡೆಯಲಿದೆ. ಪರೀಕ್ಷೆಯಲ್ಲಿ ಅರ್ಹತೆ ಪಡೆದ ಅಭ್ಯರ್ಥಿಗಳು ಯಾವುದೇ ನೇಮಕಾತಿ ಏಜೆನ್ಸಿಗಳಿಗೆ ಉನ್ನತ ಮಟ್ಟದ ಪರೀಕ್ಷೆಗೆ ಅರ್ಜಿ ಸಲ್ಲಿಸಲಿದ್ದಾರೆ.