ನವದೆಹಲಿ: ಉದ್ಯೋಗದಾತ ಮತ್ತು ನೌಕರರ ಪಿಎಫ್ ಕೊಡುಗೆ ಪಾವತಿಸುವ ಯೋಜನೆಯನ್ನು ಆಗಸ್ಟ್ವರೆಗೆ ಮೂರು ತಿಂಗಳು ವಿಸ್ತರಿಸುವ ಪ್ರಸ್ತಾಪವನ್ನು ಕೇಂದ್ರ ಸಚಿವ ಸಂಪುಟ ಬುಧವಾರ ಅಂಗೀಕರಿಸಿದೆ.
ಕೊರೊನಾ ವೈರಸ್ ಹಿನ್ನೆಲೆಯಲ್ಲಿ ಪಿಎಫ್ ಚಂದಾದಾರರಿಗೆ ನೆರವಾಗುವಂತೆ ಮಾಡಲು ಇಪಿಎಫ್ ಯೋಜನೆಗೆ ತಿದ್ದುಪಡಿ ತರಲಾಗಿದೆ. ಇಪಿಎಫ್ ಯೋಜನೆಯಿಂದ ಹಣ ಹಿಂತೆಗೆದುಕೊಳ್ಳುವುದಕ್ಕೆ ವಿಶೇಷ ಅವಕಾಶ ಕಲ್ಪಿಸಿರುವುದು ಪ್ರಧಾನಮಂತ್ರಿ ಗರೀಬ್ ಕಲ್ಯಾಣ ಯೋಜನೆಯ ಭಾಗವಾಗಿದೆ. ಮೇ ತಿಂಗಳಲ್ಲಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಈ ಘೋಷಣೆ ಮಾಡಿದ್ದರು.
ಆಗಸ್ಟ್ ತನಕ ಸರ್ಕಾರ ನೌಕರರು ಮತ್ತು ಉದ್ಯೋಗದಾತರ ಕೊಡುಗೆಗಳನ್ನು ಪಾವತಿಸುವ ಯೋಜನೆಯನ್ನು ವಿಸ್ತರಿಸಲು ಕ್ಯಾಬಿನೆಟ್ ಅನುಮೋದನೆ ನೀಡಿದೆ. ಉದ್ಯೋಗಿಗಳಿಗೆ ಹೆಚ್ಚಿನ ಟೇಕ್-ಹೋಮ್ ವೇತನ ಒದಗಿಸಲು ಮತ್ತು ಪಿಎಫ್ ಬಾಕಿ ಪಾವತಿಸುವಲ್ಲಿ ಪರಿಹಾರ ನೀಡಲು ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಕೇಂದ್ರ ಸಚಿವ ಪ್ರಕಾಶ್ ಜಾವಡೇಕರ್ ತಿಳಿಸಿದರು.
ಮೂರು ತಿಂಗಳ ಬೇಸಿಕ್ ವೇತನ ಹಾಗೂ ತುಟ್ಟಿ ಭತ್ಯೆಗಳ ವ್ಯಾಪ್ತಿಯಲ್ಲಿ ಬರುವ ನಾನ್ ರಿಫಂಡಬಲ್ ವಿತ್ಡ್ರಾಯಲ್ ಅಥವಾ ಇಪಿಎಫ್ ಖಾತೆಯಲ್ಲಿ ಸದಸ್ಯರ ಕ್ರೆಡಿಟ್ನಲ್ಲಿ ಲಭ್ಯವಿರುವ ಶೇ.75ರಷ್ಟು ಮೊತ್ತ ಈ ಎರಡರಲ್ಲಿ ಯಾವುದು ಕಡಿಮೆಯಿದೆಯೋ ಅದನ್ನು ನೀಡಲಾಗುವುದು. ಇದಕ್ಕಿಂತಲೂ ಕಡಿಮೆ ಮೊತ್ತವನ್ನೂ ಸದಸ್ಯರು ಹಿಂತೆಗೆದುಕೊಳ್ಳಬಹುದು. ಇದು ಮುಂಗಡ ಹಣವಾದ್ದರಿಂದ ಇದಕ್ಕೆ ಆದಾಯ ತೆರಿಗೆ ಕಡಿತಗಳು ಇರುವುದಿಲ್ಲ ಎಂದು ಸಚಿವಾಲಯ ತಿಳಿಸಿತ್ತು.