ನವದೆಹಲಿ: ಕೊಟಕ್ ಮಹೀಂದ್ರಾ ಬ್ಯಾಂಕ್ ಇಂಡಿಯಾ ಇಂಕ್ ಮತ್ತು ಹಣಕಾಸು ಕ್ಷೇತ್ರದ ಪ್ರಮುಖ ಧ್ವನಿಯಾಗಿದೆ ಎಂದು ಸಿಐಐ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ/ ಸಿಇಒ ಉದಯ್ ಕೊಟಕ್ ಹೇಳಿದರು.
ಐಎಎನ್‌ಎಸ್ ಸುದ್ದಿಸಂಸ್ಥೆಗೆ ವಿಶೇಷ ಸಂದರ್ಶನ ನೀಡಿ ಮಾತನಾಡಿದ ಅವರು, ಚೀನಾ ಜೊತೆಗಿನ ಗಡಿ ಸಮಸ್ಯೆಯು ಹೆಚ್ಚು ಸ್ಪರ್ಧಾತ್ಮಕ ದೇಶಿಯ ಸಾಮರ್ಥ್ಯಗಳನ್ನು ನಿರ್ಮಿಸಲು ಅವಕಾಶವನ್ನು ಸೃಷ್ಟಿಸಿದೆ. ಭಾರತೀಯರು ಆರ್ಥಿಕವಾಗಿ ಇನ್ನೂ ಹೆಚ್ಚು ಸ್ವಾವಲಂಬಿಗಳಾಗಬೇಕಿದೆ ಎಂದು ಅವರು ಅಭಿಪ್ರಾಯಪಟ್ಟರು.
ಅನೇಕ ಕೈಗಾರಿಕೆಗಳು ಕಚ್ಚಾ ವಸ್ತುಗಳು ಮತ್ತು ಬಿಡಿ ಭಾಗಗಳಿಗಾಗಿ ಚೀನಾದ ಮೇಲೆ ಹೆಚ್ಚು ಅವಲಂಬಿತವಾಗಿವೆ. ಚೀನಾದೊಂದಿಗೆ ಸಂಪೂರ್ಣ ಪ್ರತ್ಯೇಕತೆ (ಡಿಕೌಪ್ಲಿಂಗ್) ಸದ್ಯದಲ್ಲಿ ಸಾಧ್ಯವಾಗುವುದಿಲ್ಲ ಎಂದರು.
ಆರ್ಥಿಕತೆ ತೀವ್ರವಾಗಿ ಕುಸಿದಿದ್ದ ಏಪ್ರಿಲ್ ಅಥವಾ ಮೇ ತಿಂಗಳಿಗಿಂತ ಜೂನ್ ತಿಂಗಳ ಬೆಳವಣಿಗೆಯ ದತ್ತಾಂಶವು ಉತ್ತಮವಾಗಿ ಕಾಣುತ್ತಿವೆ. ಆರ್ಥಿಕತೆಯು ಪೂರ್ವ ಲಾಕ್‌ಡೌನ್ ಮಟ್ಟಕ್ಕೆ ಮರಳಲು ಸುಮಾರು ಒಂದು ವರ್ಷ ತೆಗೆದುಕೊಳ್ಳಬಹುದು. ಆದರೆ, ಬೇಡಿಕೆಯು ವೇಗದ ಹೆಚ್ಚಿಸಿಕೊಂಡಿದ್ದೇ ಆದಲ್ಲಿ ವರ್ಷಕ್ಕೂ ಮೊದಲೇ ನಿಗದಿತ ಗುರಿ ತಲುಪಬಹುದು ಎಂದು ಅವರು ಭವಿಷ್ಯ ನುಡಿದರು.
ಕೋವಿಡ್ ವೇಳೆಯಲ್ಲಿನ ಸಾಂಸ್ಥಿಕ ಪ್ರವೃತ್ತಿಗಳ ಕುರಿತು ಮಾತನಾಡುತ್ತಾ, ರಿಮೋಟ್ ಕೆಲಸಗಳ ವ್ಯಾಪಕ ಸ್ವೀಕೃತಿಯಿಂದಾಗಿ ಭಾರತದ ಕಚೇರಿ ಮತ್ತು ಕಾರ್ಖಾನೆಗಳಿಗೆ ಒಂದು ದೊಡ್ಡ ಅವಕಾಶದ ಬಾಗಿಲು ತೆರೆಯುವಂತೆ ಮಾಡಿತು. ಅನೇಕ ಕಂಪನಿಗಳು ತಮ್ಮ ಉದ್ಯೋಗಿಗಳಿಗೆ ಸಾಧ್ಯವಾದಲ್ಲೆಲ್ಲಾ ಮನೆಯಿಂದಲೇ ಕೆಲಸ ಮಾಡಲು ಅನುವು ಮಾಡಿಕೊಡುತ್ತಿವೆ. ಸಾಮಾಜಿಕ ಅಂತರ ಕಾಪಾಡಲು ಮತ್ತು ಭೌತಿಕ ಸಭೆಗಳ ಬದಲಿಗೆ ಡಿಜಿಟಲ್ ಸಂಪರ್ಕ ಸಾಧನಗಳು ವ್ಯಾಪಕವಾಗಿ ಬಳಸಲಾಗುತ್ತದೆ. ಉತ್ಪಾದನೆಯಲ್ಲಿ ಕಾರ್ಖಾನೆಗಳು ಸೋಂಕಿನ ಅಪಾಯ ತಗ್ಗಿಸಲು ಕಾರ್ಮಿಕ ಉಳಿತಾಯ ತಂತ್ರಜ್ಞಾನಗಳನ್ನು ಬಳಸುತ್ತವೆ ಎಂದು ಸಿಐಐ ಅಧ್ಯಕ್ಷರು ಹೇಳಿದರು.