ಬೆಂಗಳೂರು: ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ/ ಬೆಂಗಳೂರು ವಿಮಾನ ನಿಲ್ದಾಣದ (ಕೆಐಎಬಿ/ಬಿಎಲ್‌ಆರ್) ಪ್ರಯಾಣಿಕರ ಸಂಖ್ಯೆಯು 2019ರ ಕ್ಯಾಲೆಂಡರ್ ವರ್ಷದಲ್ಲಿ 33.65 ಮಿಲಿಯನ್ (3.36 ಕೋಟಿ) ದಾಟಿದೆ.
ಈ ಹಿಂದಿನ ಕ್ಯಾಲೆಂಡರ್ ವರ್ಷದಲ್ಲಿ ಪ್ರಯಾಣಿಕರ ಸಂಖ್ಯೆ 3.23 ಕೋಟಿಯಷ್ಟಿದ್ದು, ಬೆಳವಣಿಗೆ ದರ ಶೇ 4.1ರಷ್ಟಿದೆ. ಅಂತಾರಾಷ್ಟ್ರೀಯ ಪ್ರಯಾಣಿಕ ದಟ್ಟಣೆ ಬೆಳವಣಿಗೆಯು ಎರಡಂಕಿ ದಾಟಿದ್ದು, ಶೇ 14ರಷ್ಟಿದೆ. ಇದು 2018ರಲ್ಲಿ 4.27 ಮಿಲಿಯನ್ ಇದ್ದದ್ದು, 2019ರಲ್ಲಿ 4.87 ಕೋಟಿಗೆ ತಲುಪಿದೆ. ದೇಶಿಯ ಪ್ರಯಾಣಿಕರ ದಟ್ಟಣೆ ಸಹ ಶೇ 2.6ರಷ್ಟು ಏರಿಕೆಯಾಗಿ 28.05 ಮಿಲಿಯನ್ನಿಂದ 28.78 ಮಿಲಿಯನ್ಗೆ ತಲುಪಿದೆ ಎಂದು ಕೆಐಎಬಿ ತಿಳಿಸಿದೆ.
2019ರ ವರ್ಷ ವಿಮಾನಯಾನ ಕ್ಷೇತ್ರಕ್ಕೆ ಪ್ರಕ್ಷುಬ್ಧ ವರ್ಷವಾಗಿದ್ದು, ದೊಡ್ಡ-ದೊಡ್ಡ ವಿಮಾನಯಾನ ಸಂಸ್ಥೆಗಳು ಸೇವೆಯಿಂದ ಹಿಂದಕ್ಕೆ ಸರಿದವು. ಇದರಿಂದ ಪೂರೈಕೆಗೆ ಅಡ್ಡ ಸವಾಲುಗಳು ಎದುರಾದವು ಎಂದು ಕೆಐಎಬಿ ಪ್ರಕಟಣೆಯಲ್ಲಿ ಹೇಳಿದೆ.
ಏರ್ ಟ್ರಾಫಿಕ್ ಮ್ಯಾನೇಜ್ಮೆಂಟ್ನಲ್ಲಿ (ಎಟಿಎಂ) ಏರಿಳಿತದ ಪರಿಣಾ ಬೀರಿದ್ದು, 2014-ರಿಂದ 2018ರ ಕ್ಯಾಲೆಂಡರ್ ವರ್ಷಗಳ ನಡುವೆ ಬೆಳವಣಿಗೆಯು ಎರಡಂಕಿಯಲ್ಲಿತ್ತು. 2019ರಲ್ಲಿ ಅದು ಶೇ 0.1ರಷ್ಟು ಕುಸಿದಿದೆ. 2018ರಲ್ಲಿ 235,190 ಇದ್ದ ಎಟಿಎಂ ಪ್ರಮಾಣ 2019ರಲ್ಲಿ 235,058 ಆಗಿದೆ.
ಭಾರತದಲ್ಲಿ ವಾಯುಯಾನ ಮಾರುಕಟ್ಟೆಯು ಚೇತರಿಕೆ ಹಾದಿಯಲ್ಲಿದೆ. ಮುಂದಿನ ಐದು ವರ್ಷಗಳಲ್ಲಿ ಬಿಎಲ್‌ಆರ್ ವಿಮಾನ ನಿಲ್ದಾಣವು 55 ರಿಂದ 65 ದಶಲಕ್ಷ ಪ್ರಯಾಣಿಕರನ್ನು ಹೊಂದಲಿದೆ. ವಿಮಾನ ನಿಲ್ದಾಣದ ಮೂಲಸೌಕರ್ಯ ಅಭಿವೃದ್ಧಿ ಹಾಗೂ ಬೆಳವಣಿಗೆಯ ದೃಷ್ಟಿಯಿಂದ 13,000 ಕೋಟಿ ರೂ. ವಿನಿಯೋಗಿಸಲಾಗುತ್ತಿದೆ ಎಂದು ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಎಂಡಿ ಮತ್ತು ಸಿಇಒ ಹರಿ ಮಾರಾರ್ ಹೇಳಿದರು.