ನವದೆಹಲಿ: ಅಖಿಲ ಭಾರತ ಬ್ಯಾಂಕ್ ಉದ್ಯೋಗಿಗಳ ಸಂಘಟನೆಯ ಸದಸ್ಯರು ದೆಹಲಿಯಲ್ಲಿ ಕೇಂದ್ರ ಸರ್ಕಾರ ನಿನ್ನೆ (ಶುಕ್ರವಾರ) ಘೋಷಿಸಿದ ಸಾರ್ವಜನಿಕ ವಲಯದ 10 ಬ್ಯಾಂಕ್ಗಳನ್ನು ವಿಲೀನಗೊಳಿಸಿ ಅವುಗಳ ಸಂಖ್ಯೆಯನ್ನು ನಾಲ್ಕಕ್ಕೆ ತಗ್ಗಿಸುವುದನ್ನು ವಿರೋಧಿಸಿ ಪ್ರತಿಭಟನೆ ನಡೆಸಿದರು.
ಓರಿಯಂಟಲ್ ಬ್ಯಾಂಕ್, ಪಂಜಾಬ್ ನ್ಯಾಷನಲ್ ಬ್ಯಾಂಕ್ ಮತ್ತು ಯುನೈಟೆಡ್ ಬ್ಯಾಂಕ್, ಯೂನಿಯನ್ ಬ್ಯಾಂಕ್, ಆಂಧ್ರ ಬ್ಯಾಂಕ್ ಮತ್ತು ಕಾರ್ಪೊರೇಷನ್ ಬ್ಯಾಂಕ್ ಹಾಗೂ ಕೆನರಾ ಬ್ಯಾಂಕ್ ಮತ್ತು ಸಿಂಡಿಕೇಟ್ ಬ್ಯಾಂಕ್ಗಳನ್ನು ನಾಲ್ಕು ಹಂತದಲ್ಲಿ ವಿಲೀನಗೊಳಿಸುವುದಾಗಿ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಶುಕ್ರವಾರ ಘೋಷಿಸಿದ್ದರು.
ಎಲ್ಲ ಸಾರ್ವಜನಿಕ ಮತ್ತು ಖಾಸಗಿ ವಲಯದ ಬ್ಯಾಂಕ್ಗಳ ನೌಕರರು ಕೈಗೆ ಕಪ್ಟು ಪಟ್ಟಿ ಕಟ್ಟಿಕೊಂಡು ಬ್ಯಾಂಕ್ ವಿಲೀನವನ್ನು ಆಕ್ಷೇಪಿಸಿ ಕೇಂದ್ರದ ವಿರುದ್ಧ ಘೋಷಣೆ ಕೂಗಿದರು. ಬ್ಯಾಂಕ್ಗಳ ವಿಲೀನದಿಂದ ಸ್ಥಿರತೆಯನ್ನು ಕಾಯ್ದುಕೊಳ್ಳಲು ಸಾಧ್ಯವಿಲ್ಲ, ಆರ್ಥಿಕ ಅಭಿವೃದ್ದಿಯೂ ಸಾಧ್ಯವಿಲ್ಲ ಎಂದು ಪ್ರತಿಭಟನಾಕಾರರು ಆಪಾದಿಸಿರು.
ಈ ವೇಳೆ ಮಾತನಾಡಿದ ಸಂಘಟನೆಯ ಜನರಲ್ ಕಾರ್ಯದರ್ಶಿ ಸಿ ಹೆಚ್ ವೆಂಕಟಾಚಲಂ ಅವರು, ಸರ್ಕಾರ ತೆಗೆದುಕೊಂಡ ವಿಲೀನದ ನಿರ್ಧಾರವನ್ನು ಪುನರ್ ವಿಮರ್ಶಗೆ ಒಳಪಡಿಸಿಕೊಳ್ಳಬೇಕು. ಬ್ಯಾಂಕ್ ಉದ್ಯೋಗಿಗಳ ಸಂಘಟನೆಯು ಇದನ್ನು ವಿರೋಧಿಸುತ್ತದೆ. ಸಂಘಟನೆಯ ಮುಖಂಡರು ದೆಹಲಿಯಲ್ಲಿ ಸೆಪ್ಟೆಂಬರ್ 11ರಂದು ಸಭೆ ನಡೆಸಿ ಪ್ರತಿಭಟನೆ ನಡೆಸುವ ಬಗ್ಗೆ ತೀರ್ಮಾನ ತೆಗೆದುಕೊಳ್ಳಲಾಗುವುದು ಎಂದಿದ್ದಾರೆ.