ನವದೆಹಲಿ : ಕೇಂದ್ರ ಆಯುಷ್ ಸಚಿವಾಲಯದ ರಾಜ್ಯ ಸಚಿವ ಶ್ರೀಪಾದ್ ನಾಯಕ್ ಅವರು ಕೊರೊನಾ ಸೋಂಕಿಗೆ ಪತಂಜಲಿ ಹೊಸದಾಗಿ ಶೋಧಿಸಿದ ಔಷಧಿ ಬಗ್ಗೆ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ. 'ಆಯುರ್ವೇದ ಔಷಧಿ 'ಕೊರೊನಿಲ್' ಮತ್ತು 'ಸ್ವಸಾರಿ' ಬಗ್ಗೆ ವರದಿ ಬಂದ ಬಳಿಕ ಆಯುಷ್ ಸಚಿವಾಲಯ ತನ್ನ ನಿಲುವು ತಿಳಿಸುತ್ತದೆ' ಎಂದರು.
ಯೋಗ ಗುರು ಬಾಬಾ ರಾಮ್ದೇವ್ ಅವರ ಪತಂಜಲಿ ಔಷಧಿ ಸಂಸ್ಥೆ ಅಭಿವೃದ್ಧಿ ಪಡಿಸಿದ ‘ಕೊರೊನಿಲ್’ ಮತ್ತು ‘ಸ್ವಸಾರಿ’ ಔಷಧಿಗಳ ಕುರಿತು ಜಾಹೀರಾತು ನಿಲ್ಲಿಸಿ ಹಾಗೂ ಈ ಬಗ್ಗೆ ಮಾಹಿತಿ ಕೊಡುವಂತೆ ಆಯುಷ್ ಸಚಿವಾಲಯ ಮಂಗಳವಾರ ನೋಟಿಸ್ ನೀಡಿತ್ತು.
ಬಾಬಾ ರಾಮ್ದೇವ್ ಕೊರೊನಾ ಚಿಕಿತ್ಸೆಗೆ ಹೊಸ ಆಯುರ್ವೇದ ಔಷಧಿ ಕಂಡು ಹಿಡಿದಿದ್ದು ಸಂತೋಷದ ವಿಷಯ. ಆದರೆ, ನಿಯಮದ ಪ್ರಕಾರ, ಅದು ಆಯುಷ್ ಸಚಿವಾಲಯಕ್ಕೆ ಪ್ರಥಮವಾಗಿ ಬರಬೇಕು. ನಮಗೆ ವರದಿ ಕಳುಹಿಸಿರುವುದಾಗಿ ಪತಂಜಲಿ ಸಂಸ್ಥೆ ಹೇಳಿದೆ. ನಾವು ಅದನ್ನು ಪರಿಶೀಲಿಸಿದ ಬಳಿಕ ಮಾರುಕಟ್ಟೆಗೆ ತರಲು ಅನುಮತಿ ನೀಡುತ್ತೇವೆ ಎಂದು ಹೇಳಿದರು.
ಹರಿದ್ವಾರದ ಪತಂಜಲಿ ಆಯುರ್ವೇದ ಲಿಮಿಟೆಡ್, ಕೋವಿಡ್-19 ಚಿಕಿತ್ಸೆಗಾಗಿ ಅಭಿವೃದ್ಧಿಪಡಿಸಿದ ಆಯುರ್ವೇದ ಔಷಧಿಗಳ ಬಗ್ಗೆ ಮಾಧ್ಯಮಗಳಲ್ಲಿ ಬಂದ ಸುದ್ದಿ ಮೂಲಕ ತಿಳಿದುಕೊಳ್ಳಲಾಗಿದೆ ಎಂದು ಆಯುಷ್ ಸಚಿವಾಲಯ ಮಂಗಳವಾರ ತಿಳಿಸಿತ್ತು. "ಹಕ್ಕುಗಳ ಜಾಹೀರಾತು/ ಪ್ರಚಾರ ಮಾಡುವುದನ್ನು ನಿಲ್ಲಿಸುವಂತೆ ಕಂಪನಿಗೆ ಸೂಚಿಸಲಾಗಿದೆ. ಸಮಸ್ಯೆಯನ್ನು ಸರಿಯಾಗಿ ಪರಿಶೀಲಿಸಲಾಗುತ್ತದೆ" ಎಂದರು.