ನವದೆಹಲಿ: ವಾಹನೋದ್ಯಮ ಕ್ಷೇತ್ರದ ಮಂದಗತಿಯಿಂದಾಗಿ ನಿರೀಕ್ಷಿತ ಪ್ರಮಾಣದಲ್ಲಿ ತೆರಿಗೆ ಹರಿದು ಬರುತ್ತಿಲ್ಲ. ಹೀಗಾಗಿ, ರಾಜ್ಯಗಳಿಗೆ ನೀಡಬೇಕಾದ ಜಿಎಸ್‌ಟಿ ಪರಿಹಾರ ನಿಧಿಯ ಮೇಲೆ ಪ್ರತಿಕೂಲ ಪರಿಣಾಮ ಬೀರಿದೆ ಎಂದು ಬಿಹಾರ ಉಪಮುಖ್ಯಮಂತ್ರಿ ಸುಶೀಲ್ ಮೋದಿ ಅಭಿಪ್ರಾಯಪಟ್ಟಿದ್ದಾರೆ.
ಜಿಎಸ್‌ಟಿ ತೆರಿಗೆ ಪದ್ಧತಿ ಜಾರಿಯಿಂದ ರಾಜ್ಯಗಳಿಗೆ ಉಂಟಾಗುವ ಆದಾಯ ಕೊರತೆಯನ್ನು ಸರಿದೂಗಿಸಲು ಕೇಂದ್ರ, ಪ್ರತಿ ತಿಂಗಳು ಜಿಎಸ್‌ಟಿ ಪರಿಹಾರ ನಿಧಿ ನೀಡುತ್ತದೆ. ಆದರೆ, ಕಳೆದ ಕೆಲ ತಿಂಗಳಿಂದ ಈ ಹಣ ರಾಜ್ಯಗಳಿಗೆ ವಿತರಣೆ ಆಗಿಲ್ಲ. ಇತ್ತೀಚೆಗೆ ಈ ಬಗ್ಗೆ ಎಲ್ಲ ರಾಜ್ಯಗಳ ಹಣಕಾಸು ಸಚಿವರು ಕೇಂದ್ರ ವಿತ್ತೀಯ ಸಚಿವರನ್ನು ಭೇಟಿ ಮಾಡಿ ತಮ್ಮ ಕಳವಳ ವ್ಯಕ್ತಪಡಿಸಿದ್ದಾರೆ.
ಜಿಎಸ್‌ಟಿ ಸಚಿವರುಗಳ ತಂಡದ ಮುಖ್ಯಸ್ಥರಾಗಿರುವ ಸುಶೀಲ್ ಮೋದಿ, ಆರ್ಥಿಕ ಕುಸಿತ, ವಿಶೇಷವಾಗಿ ವಾಹನೋದ್ಯಮ ವಲಯದಲ್ಲಿ ಮಾರಾಟ ಕ್ಷೀಣಿಸಿದ್ದರಿಂದಾಗಿ ತೆರಿಗೆ ಸಂಗ್ರಹದಲ್ಲಿ ಕುಸಿತವಾಗುತ್ತಿದೆ. ಆಟೋಮೊಬೈಲ್ ವಲಯವು ಜಿಎಸ್ಟಿಯಲ್ಲಿ ಪ್ರಮುಖ ಪಾತ್ರವಹಿಸುತ್ತದೆ. ಈ ವಲಯದಿಂದ ಅಗತ್ಯವಾದಷ್ಟು ಹಣ ಹರಿದು ಬರುತ್ತಿಲ್ಲ. ಈ ಕಾರಣದಿಂದ ರಾಜ್ಯಗಳಿಗೆ ಪರಿಹಾರ ನಿಧಿ ಪಾವತಿಸಲು ಆಗುತ್ತಿಲ್ಲ ಎಂದು ತಿಳಿಸಿದ್ದಾರೆ.