ನವದೆಹಲಿ: ಆಟೋಮೊಬೈಲ್ ಕ್ಷೇತ್ರದಲ್ಲಿ ನಡೆಯುತ್ತಿರುವ ಮಂದಗತಿ ಬೆಳವಣಿಗೆಯಿಂದ ಬೇಸತ್ತ ಬ್ಲ್ಯೂ ಉದ್ಯಮದ ಮುಖಂಡರು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರನ್ನು ಭೇಟಿ ಮಾಡಿ, ಉದ್ಯಮ ವಲಯದ ಸಂಕಷ್ಟಗಳಿಗೆ ಪರಿಹಾರ ಕಂಡುಕೊಳ್ಳುವಂತೆ ಮನವಿ ಮಾಡಿದ್ದಾರೆ.
ಆಟೋಮೊಬೈಲ್ ವಲಯ ಜುಲೈ ತಿಂಗಳಲ್ಲಿ ಅತ್ಯಂತ ಕಳಪೆ ಮಟ್ಟದ ಮಾರಾಟ ದಾಖಲಿಸಿದ್ದು, ಇದು ಎರಡು ದಶಕಗಳಲ್ಲಿನ ಕೆಟ್ಟ ಮಾರಾಟದ ಪ್ರದರ್ಶನ ತೋರಿದೆ ಎಂದು ವಿತ್ತ ಸಚಿವರ ಮುಂದೆ ವಾಹನ ವಿತರಕ ಸಂಘದ ಒಕ್ಕೂಟವು (ಎಫ್ಎಡಿಎ) ಅಲವತ್ತುಕೊಂಡಿದೆ.
2001ರಿಂದ ಆಟೋಮೊಬೈಲ್ ಕ್ಷೇತ್ರ ಅತ್ಯಂತ ಕೆಟ್ಟ ಹಂತದಲ್ಲಿ ಸಾಗುತ್ತಿದೆ. ಕಳೆದ 2-3 ತಿಂಗಳಲ್ಲಿ 2 ಲಕ್ಷಕ್ಕೂ ಅಧಿಕ ಉದ್ಯೋಗಗಳು ಕಡಿತವಾಗಿವೆ. ಉದ್ಯಮದ ಸುಧಾರಣೆ ಹಾಗೂ ಪುನರುಜ್ಜೀವನ ಪ್ರಸ್ತುತ ಅತ್ಯಗತ್ಯವಾಗಿದೆ. ಹಣಕಾಸಿನ ಸುಲಭ ಲಭ್ಯತೆ ಉದ್ಯಮಿಗಳಿಗೆ ಸಿಗಬೇಕಿದೆ. ಒಂದೂವರೆ ದಶಕದಿಂದ ವಾಹನ ಮಾರಾಟ ಉದ್ಯಮದಲ್ಲಿ ನಿರತವಾಗಿದ್ದವರು ನಷ್ಟದಲ್ಲಿದ್ದು, ಮತ್ತೆ ಮೇಲೆ ಬರಲು ಹಣಕಾಸಿನ ಪ್ರೋತ್ಸಾಹ ಹೆಚ್ಚಿನ ಹೆಚ್ಚಿಸಬೇಕು ಎಂದು ಸೀತಾರಾಮನ್ ಅವರಿಗೆ ಮನವಿ ಮಾಡಿದೆ.
ಸದ್ಯ ಆಗಿರುವ ಉದ್ಯೋಗ ಕಡಿತ ಮಾರಾಟಕ್ಕೆ ಸಂಬಂಧಿಸಿದ್ದಾಗಿದೆ. ಇದೇ ಪರಿಸ್ಥಿತಿ ಮುಂದುವರಿದರೆ ಉದ್ಯಮದಲ್ಲಿನ ತಂತ್ರಜ್ಞಾನ ಕೆಲಸಕ್ಕೂ ಕುತ್ತು ಬರಲಿದೆ. ಮಾರಾಟ ಕಡಿಮೆಯಾದರೆ, ಸೇವೆಯ ಪ್ರಮಾಣವು ಇಳಿಕೆಯಾಗುತ್ತದೆ ಎಂದು ವಿವರಿಸಿದೆ.