ನವದೆಹಲಿ: 2 ಜಿ ಸ್ಪೆಕ್ಟ್ರಮ್ ಹಂಚಿಕೆ ಹಗರಣ ಪ್ರಕರಣಗಳಲ್ಲಿ ಮಾಜಿ ಕೇಂದ್ರ ಟೆಲಿಕಾಂ ಸಚಿವ ಎ.ರಾಜಾ ಮತ್ತು ಇತರರನ್ನು ಖುಲಾಸೆಗೊಳಿಸಿರುವುದನ್ನು ಪ್ರಶ್ನಿಸಿ ಸಿಬಿಐ ಮತ್ತು ಇಡಿ ಸೋಮವಾರ ದೆಹಲಿ ಹೈಕೋರ್ಟ್ನ ಕದ ತಟ್ಟಿವೆ.
ನ್ಯಾಯಮೂರ್ತಿ ಬ್ರಿಜೇಶ್ ಸೇಥಿ ಅವರ ಮುಂದೆ ಬಂದ ಮನವಿಗಳನ್ನು ವಿಚಾರಣೆಗೆ ಕೈಗೆತ್ತಿಕೊಂಡರು. ಪ್ರಕರಣದಲ್ಲಿನ ಆರೋಪಿಗಳ ಬಗ್ಗೆ ಶೀಘ್ರವೇ ವಿಚಾರಣೆಯನ್ನು ನಡೆಸುವಂತೆ ಕೇಂದ್ರೀಯ ತನಿಖಾ ಸಂಸ್ಥೆ ಹಾಗೂ ಜಾರಿ ನಿರ್ದೇಶನಾಲಯ ಮನವಿ ಮಾಡಿದವು. ಕೋರ್ಟ್ ಸೆಪ್ಟೆಂಬರ್ 10ಕ್ಕೆ ವಿಚಾರಣೆ ನಡೆಸಲಿದೆ.
2 ಜಿ ಹಗರಣಕ್ಕೆ ಸಂಬಂಧಿಸಿದ ಮನಿ ಲಾಂಡರಿಂಗ್ ಪ್ರಕರಣದಲ್ಲಿ ಖುಲಾಸೆಗೊಂಡಿರುವ ಸಂಸ್ಥೆಯೊಂದು, ಇಡಿ ಜಪ್ತಿ ಮಾಡಿಕೊಂಡಿರುವ 22 ಕೋಟಿ ರೂ. ಮೌಲ್ಯದ ತನ್ನ ಆಸ್ತಿ ತನಗೆ ಮರಳಿಸುವಂತೆ ಕೋರಿ ಅರ್ಜಿ ಸಲ್ಲಿಸಿದೆ. ಇದಕ್ಕೆ ಸಂಬಂಧಿಸಿದ ಅರ್ಜಿ ವಿಚಾರಣೆ ಸೆ.12 ರಂದು ನಡೆಯಲಿದೆ.
2ಜಿ ಹಗರಣಕ್ಕೆ ಸಂಬಂಧಿಸಿ ಕೇಂದ್ರದ ಮಾಜಿ ಸಚಿವ ಎ.ರಾಜಾ, ಡಿಎಂಕೆ ಸಂಸದೆ ಕನಿಮೋಳಿ ಹಾಗೂ ಇತರರ ವಿರುದ್ಧ ಸಿಬಿಐ ಹಾಗೂ ಇ.ಡಿ ಪ್ರಕರಣ ದಾಖಲಿಸಿ, ತನಿಖೆ ಕೈಗೊಂಡಿದ್ದವು. ವಿಚಾರಣೆ ನಡೆಸಿದ್ದ ವಿಶೇಷ ನ್ಯಾಯಾಲಯ ಎಲ್ಲರನ್ನು 2017ರ ಡಿಸೆಂಬರ್ 21ರಂದು ಖುಲಾಸೆಗೊಳಿಸಿ ತೀರ್ಪು ನೀಡಿತ್ತು.