ಮುಂಬೈ: ಮಾಡಿದ್ದ ಸಾಲವನ್ನು ವಾಪಸ್ ನೀಡುವಲ್ಲಿ ವಿಫಲವಾದ ಉದ್ಯಮಿ ಅನಿಲ್ ಅಂಬಾನಿ ಒಡೆತನದ ಮುಂಬೈ ಉಪನಗರ ಸಾಂತಕ್ರೂಝ್ನಲ್ಲಿರುವ ಕೇಂದ್ರ ಕಚೇರಿಯನ್ನು ಯೆಸ್ ಬ್ಯಾಂಕ್ ಸ್ವಾಧೀನಪಡಿಸಿಕೊಂಡಿದೆ.
ಖಾಸಗಿ ಒಡೆತನದ ಯೆಸ್ ಬ್ಯಾಂಕ್ನಿಂದ ಅನಿಲ್ ಅಂಬಾನಿ ಅವರ ಸಮೂಹ 2,892 ಕೋಟಿ ರೂ. ಸಾಲ ಪಡೆದಿತ್ತು. ಇದನ್ನು ಹಿಂತಿರುಗಿಸಲು ಸಾಧ್ಯವಾಗದ ಹಿನ್ನಲೆಯಲ್ಲಿ ಬ್ಯಾಂಕ್, ಕಂಪನಿಯ ಕೇಂದ್ರ ಕಚೇರಿಯನ್ನು ಸ್ವಾಧೀನಪಡಿಸಿಕೊಂಡಿದೆ. ಇದರ ಜೊತೆಗೆ ದಕ್ಷಿಣ ಮುಂಬೈಯ ರಿಲಯನ್ಸ್ ಇನ್ಪ್ಫ್ರಾಸ್ಟ್ರಕ್ಚರ್ಗೆ ಸೇರಿದ ಎರಡು ಫ್ಲಾಟ್ ಅನ್ನು ತನ್ನ ತೆಕ್ಕೆಗೆ ತೆಗೆದುಕೊಂಡಿದೆ ಎಂದು ಪತ್ರಿಕೆಯಲ್ಲಿ ನೀಡಿದ್ದ ಜಾಹೀರಾತಿನಲ್ಲಿ ತಿಳಿಸಿದೆ.
ಇತ್ತೀಚೆಗೆ ಅನಿಲ್ ಧೀರುಭಾಯಿ ಅಂಬಾನಿ ಸಮೂಹಕ್ಕೆ ಸೇರಿದ ಬಹುತೇಕ ಕಂಪನಿಗಳು ಸಾಂತಕ್ರೂಝ್ ಕಚೇರಿಯಿಂದ ಹೊರಬಂದು ರಿಲಯನ್ಸ್ ಸೆಂಟರ್ ಮೂಲಕ ಕಾರ್ಯನಿರ್ವಹಣೆ ಮಾಡುತ್ತಿದ್ದವು.
ಮೇ 6 ರಂದು ರಿಲಯನ್ಸ್ ಇನ್ಫ್ರಾಸ್ಟ್ರಕ್ಚರ್‌ನಿಂದ 2,892.44 ಕೋಟಿ ರೂ. ಬಾಕಿ ಹಣವನ್ನು ವಸೂಲಿ ಮಾಡಲು ಯತ್ನಿಸಿತ್ತು. ನೋಟಿಸ್ ನೀಡಿದ 60 ದಿನಗಳ ನಂತರವೂ ಮರುಪಾವತಿ ಮಾಡಲು ವಿಫಲವಾದ ನಂತರ ಜುಲೈ 22ರಂದು ಮೂರು ಆಸ್ತಿಗಳನ್ನು ಸ್ವಾಧೀನಪಡಿಸಿಕೊಂಡಿದೆ ಎಂದು ಯೆಸ್ ಬ್ಯಾಂಕ್ ತಿಳಿಸಿದೆ.
ಇದರೊಟ್ಟಿಗೆ ವ್ಯವಹರಿಸದಂತೆ ಸಾರ್ವಜನಿಕರಿಗೆ ಎಚ್ಚರಿಕೆ ನೀಡಿದೆ. ಈ ಆಸ್ತಿಗಳೊಂದಿಗೆ ಯಾವುದೇ ವ್ಯವಹಾರವು 2,892 ಕೋಟಿ ರೂ.ಗಳಿಗೆ ಯೆಸ್ ಬ್ಯಾಂಕ್ ಶುಲ್ಕಕ್ಕೆ ಒಳಪಟ್ಟಿರುತ್ತದೆ ಎಂದಿದೆ.