ನವದೆಹಲಿ: ದ್ವಿಚಕ್ರ ವಾಹನ ತಯಾರಕ ಇಂಡಿಯಾ ಯಮಹಾ ಮೋಟಾರ್, ತನ್ನ ಶ್ರೇಣಿಯ ಉಡುಪು ಮತ್ತು ಪರಿಕರಗಳನ್ನು ಆನ್‌ಲೈನ್‌ನಲ್ಲಿ ಮಾರಾಟ ಮಾಡಲು ಅಮೆಜಾನ್ ಇಂಡಿಯಾ ಜೊತೆ ಒಪ್ಪಂದ ಮಾಡಿಕೊಂಡಿದೆ.
ಭಾರತದಲ್ಲಿ ಇದೇ ಮೊದಲ ಬಾರಿಗೆ ಕಂಪನಿಯು ತನ್ನ ಉಡುಪು ಮತ್ತು ಪರಿಕರಗಳನ್ನು ಆನ್‌ಲೈನ್‌ನಲ್ಲಿ ಮಾರಾಟ ಮಾಡಲಿದೆ ಎಂದು ಯಮಹಾ ಮೋಟಾರ್ ಪ್ರಕಟಣೆಯಲ್ಲಿ ತಿಳಿಸಿದೆ.
ಈ ಒಪ್ಪಂದದಿಂದ ಯಮಹಾ ಗ್ರಾಹಕರು ಮತ್ತು ಮೋಟರ್ಸೈಕ್ಲಿಸ್ಟ್ಗಳು ಮೋಟಾರು ಸೈಕಲ್ ಮತ್ತು ಸ್ಕೂಟರ್‌ಗಳಿಗೆ ಅಗತ್ಯ ಪರಿಕರ ಮತ್ತು ಉಡುಪುಗಳನ್ನು ಅಮೆಜಾನ್ ಇಂಡಿಯಾ ಮೂಲಕ ಸುಲಭ ಹಾಗೂ ಅನುಕೂಲಕರ ರೀತಿಯಲ್ಲಿ ಖರೀದಿಸಲು ಸಾಧ್ಯವಾಗುತ್ತದೆ ಎಂದು ಹೇಳಿದೆ.
ಆನ್‌ಲೈನ್ ಮಾರುಕಟ್ಟೆ ಸ್ಥಳದಲ್ಲಿ ಯಮಹಾ ಸರಕುಗಳು ಟಿ-ಶರ್ಟ್, ಜಾಕೆಟ್‌ಗಳಂತಹ ಸವಾರಿ ಉಡುಪುಗಳು ಲಭ್ಯವಾಗಲಿವೆ. ಕಂಪನಿಯ ಇತರ ಸರಕುಗಳಾದ ಸ್ಟಿಕ್ಕರ್, ಕೀ ಚೈನ್ ಮತ್ತು ಇತರ ದ್ವಿಚಕ್ರ ವಾಹನ ಪರಿಕರಗಳನ್ನು ಮಾರಾಟ ಮಾಡಲಾಗುತ್ತದೆ ಎಂದು ಹೇಳಿದೆ.
ಭಾರತೀಯ ಮಾರುಕಟ್ಟೆಯಲ್ಲಿ ನಮ್ಮ ಆನ್‌ಲೈನ್ ಉಪಸ್ಥಿತಿ ಬಲಪಡಿಸಲು ನಾವು ನಿರಂತರವಾಗಿ ಕೆಲಸ ಮಾಡುತ್ತಿದ್ದೇವೆ. ನಮ್ಮ ಗುರಿ ಸಾಧಿಸಲು ಮತ್ತು ಸಂವಹನ ನಡೆಸಲು ಇಂದಿನ ಪ್ರಕಟಣೆಯು ಮತ್ತೊಂದು ಹೆಜ್ಜೆಯಾಗಿದೆ ಎಂದು ಯಮಹಾ ಮೋಟಾರ್ ಇಂಡಿಯಾ ಗ್ರೂಪ್ ಆಫ್ ಕಂಪನಿಗಳ ಅಧ್ಯಕ್ಷ ಮೊಟೊಫುಮಿ ಶಿತಾರಾ ಹೇಳಿದರು.
ಕಂಪನಿಯು ಇತ್ತೀಚೆಗೆ ಆನ್‌ಲೈನ್‌ನಲ್ಲಿ ವಾಹನ ಮಾರಾಟ ಪ್ರಾರಂಭಿಸಿದೆ. ಇದೀಗ ಸವಾರಿ ಉಡುಪು ಮತ್ತು ಪರಿಕರಗಳನ್ನು ನೀಡುವ ಮೂಲಕ ಗ್ರಾಹಕರ ವ್ಯಾಪ್ತಿ ವಿಸ್ತರಿಸುತ್ತದೆ ಎಂದರು.