ನವದೆಹಲಿ: ಆರ್ಥಿಕ ಸಂಕಷ್ಟದಿಂದ ಪಾರಾಗಲು ಹರಸಹಾಸ ಪಡುತ್ತಿರುವ ಸಾರ್ವಜನಿಕ ವಲಯದ ಬಿಎಸ್ಎನ್ಎಲ್ ಮತ್ತು ಎಂಟಿಎನ್‌ಎಲ್ ತನ್ನ ಸಿಬ್ಬಂದಿಗೆ ಸ್ವಯಂ ನಿವೃತ್ತಿ ಯೋಜನೆ (ವಿಆರ್‌ಎಸ್) ಅನುಷ್ಠಾನಕ್ಕೆ ಭರದ ಸಿದ್ಧತೆ ಮಾಡಿಕೊಳ್ಳುತ್ತಿದೆ.
ಈ ಬಗ್ಗೆ ಎರಡೂ ಟೆಲಿಕಾಂ ಕಂಪನಿಗಳ ಅಧಿಕಾರಿಗಳು ಪ್ರಧಾನಿಯವರ ಕಚೇರಿಯನ್ನು ಸಂಪರ್ಕಿಸಿದ್ದಾರೆ. ದೂರ ಸಂಪರ್ಕ ಇಲಾಖೆಯ ಅಧಿಕಾರಿಗಳೂ ಸಭೆಯಲ್ಲಿ ಭಾಗವಹಿಸಿದ್ದು, ವಿಆರ್‌ಎಸ್ ಅನುಷ್ಠಾನದ ಕುರಿತು ಚರ್ಚಿಸಿದ್ದಾರೆ.
ದೂರ ಸಂಪರ್ಕ ಇಲಾಖೆ ಕೆಲವೇ ದಿನಗಳಲ್ಲಿ ವಿಆರ್‌ಎಸ್ ಆಯ್ಕೆ ಕುರಿತು ಸಂಪುಟ ಟಿಪ್ಪಣಿ ರಚಿಸಲಿದೆ. ಇದಕ್ಕಾಗಿ ಚುನಾವಣಾ ಆಯೋಗದ ಅನುಮೋದನೆ ಪಡೆಯಲಿದ್ದು, ವಿಆರ್‌ಎಸ್‌ಗೆ ನಿಧಿ ಸಂಗ್ರಹಿಸಲು ಬಾಂಡ್‌ಗಳನ್ನು ಬಿಡುಗಡೆಗೊಳಿಸುವುದೆಂದು ಎದುರು ನೋಡಲಾಗುತ್ತಿದೆ.
ಬಿಎಸ್ಎನ್ಎಲ್ 2017-18ರಲ್ಲಿ ₹ 8,000 ಕೋಟಿ ನಷ್ಟಕ್ಕೀಡಾಗಿತ್ತು. ಎಂಟಿಎನ್‌ಎಲ್ ₹ 3,000 ಕೋಟಿ ನಷ್ಟ ಅನುಭವಿಸತ್ತು. ಉಭಯ ಕಂಪನಿಗಳಿಗೆ ಉದ್ಯೋಗಿಗಳ ವೇತನ ವಿತರಣೆಯೇ ದೊಡ್ಡ ಮೊತ್ತವಾಗುತ್ತಿದೆ. ಬಿಎಸ್ಎನ್ಎಲ್ ತನ್ನ ಒಟ್ಟು ಆದಾಯದಲ್ಲಿ ಶೇ 65ರಿಂದ 70ರಷ್ಟನ್ನು ಸಿಬ್ಬಂದಿ ವೇತನಕ್ಕೆ ಪಾವತಿಸುತ್ತಿದೆ.