ನವದೆಹಲಿ: 2019ರ ಅಕ್ಟೋಬರ್- ಡಿಸೆಂಬರ್ ತ್ರೈಮಾಸಿಕದಲ್ಲಿ ವೊಡಾಫೋನ್- ಐಡಿಯಾ ಕಂಪನಿಗೆ ₹ 6,438 ಕೋಟಿಯಷ್ಟು ನಷ್ಟು ಉಂಟಾಗಿದೆ ಎಂದು ತಿಳಿಸಿದೆ.
ವೊಡಾಫೋನ್- ಐಡಿಯಾ ಹಿಂದಿನ ವರ್ಷದ ಅವಧಿಯಲ್ಲಿ 5,004.6 ಕೋಟಿ ರೂ.ಗಳಷ್ಟಿತ್ತು. ಒಟ್ಟು ಆದಾಯವು 2019-20ರ ಮೂರನೇ ತ್ರೈಮಾಸಿಕದಲ್ಲಿ ಶೇ 5ರಷ್ಟು ಕುಸಿದು 11,380.5 ಕೋಟಿ ರೂ.ಗೆ ತಲುಪಿದೆ. ಇದು ಹಿಂದಿನ ವರ್ಷದ ಇದೇ ತ್ರೈಮಾಸಿಕದಲ್ಲಿ 11,982.8 ಕೋಟಿ ರೂ.ಯಷ್ಟಿತ್ತು.
ಹೊಂದಾಣಿಕೆಯ ಒಟ್ಟು ಆದಾಯ (ಎಜಿಆರ್) ವಿಚಾರದಲ್ಲಿ ದೂರ ಸಂಪರ್ಕ ಇಲಾಖೆಯ (ಡಿಒಟಿ) ಹೊಂದಿಗಿನ ತಕರಾರು, ಹಣಕಾಸು ವೆಚ್ಚ ಮತ್ತು ಆಸ್ತಿಗಳ ಸವಕಳಿಯ ಪ್ರಭಾವದಿಂದಾಗಿ ಈ ನಷ್ಟ ಸಂಭವಿಸಿದೆ ಎನ್ನಲಾಗುತ್ತಿದೆ.
ಕಂಪನಿಯ ಹಣಕಾಸು ವೆಚ್ಚವು ಶೇ 30ರಷ್ಟು ಏರಿಕೆಯಾಗಿ 3,722.2 ಕೋಟಿ ರೂ.ಗೆ ತಲುಪಿದೆ. ಸವಕಳಿ ಶೇ 23ರಷ್ಟು ಏರಿಕೆಯಾಗಿ 5,877.4 ಕೋಟಿ ರೂ. ಬಂದು ನಿಂತಿದೆ. ಕಂಪನಿಯ ನಷ್ಟವು ಸೆಪ್ಟೆಂಬರ್ ತ್ರೈಮಾಸಿಕದಲ್ಲಿ ಅನುಭವಿಸಿದ 50,922 ಕೋಟಿ ರೂ.ಗಳಿಗಿಂತ ಗಣನೀಯವಾಗಿ ಕಡಿಮೆಯಾಗಿದೆ. ಹೊಂದಾಣಿಕೆಯ ಒಟ್ಟು ಆದಾಯ (ಎಜಿಆರ್) ವಿಷಯದಲ್ಲಿ ಸುಪ್ರೀಂ ಕೋರ್ಟ್ ಆದೇಶದ ಬಳಿಕ ಬಾಕಿ ಹಣ ಡಿಒಟಿಗೆ ನೀಡಬೇಕಿದೆ.