ನವದೆಹಲಿ : ಭಾರತದಾದ್ಯಂತ ಆತಂಕ ಸೃಷ್ಟಿಸಿರುವ ಕೊರೊನಾ ವೈರಸ್ ವಿರುದ್ಧದ ಹೋರಾಟದಲ್ಲಿ ನೆರವಿಗೆ ಧಾವಿಸಿರುವ ಟಾಟಾ ಟ್ರಸ್ಟ್ ₹500 ಕೋಟಿ ನೆರವನ್ನು ನೀಡಿದೆ. ಕೋವಿಡ್-19 ವಿರುದ್ಧದ ಬಿಕ್ಕಟ್ಟಿನ ಓಟದ ಸ್ಪರ್ಧೆಯಲ್ಲಿ ಎದುರಿಸಬೇಕಾದ ಕಠಿಣ ಸವಾಲುಗಳು ನಮ್ಮ ಮುಂದಿವೆ.
ಟಾಟಾ ಟ್ರಸ್ಟ್ ಹಾಗೂ ಟಾಟಾ ಸಮೂಹ ಕಂಪನಿಗಳು ಈ ಹಿಂದೆಯೂ ರಾಷ್ಟ್ರದ ಅಗತ್ಯಗಳಿಗೆ ಸ್ಪಂದಿಸಿವೆ. ಈ ಸಮಯದ ಅಗತ್ಯತೆ ಎಲ್ಲದಕ್ಕಿಂತ ಮಿಗಿಲಾಗಿದೆ ಎಂದು ಟಾಟಾ ಗ್ರೂಪ್ನ ಮಾಜಿ ಮುಖ್ಯಸ್ಥ ರತನ್ ಟಾಟಾ ಅವರು ತಮ್ಮ ಫೇಸ್ಬುಕ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ.
ಈ ಅಸಾಧಾರಣ ಕಷ್ಟಕರ ಅವಧಿಯಲ್ಲಿ ಕೋವಿಡ್-19 ಬಿಕ್ಕಟ್ಟಿನ ವಿರುದ್ಧ ಹೋರಾಡುವ ಅಗತ್ಯತೆಗಳನ್ನು ನಿಭಾಯಿಸಲು ತುರ್ತು ಸಂಪನ್ಮೂಲಗಳನ್ನು ನಿಯೋಜಿಸಬೇಕಾಗಿದೆ ಎಂದು ನಾನು ನಂಬುತ್ತೇನೆ. ಇದು ಮಾನವ ಜನಾಂಗವು ಎದುರಿಸಬೇಕಾದ ಕಠಿಣ ಸವಾಲುಗಳಲ್ಲಿ ಒಂದಾಗಿದೆ ಎಂದು ಟಾಟಾ ಗ್ರೂಪ್ ಪ್ರಕಟಣೆಯಲ್ಲಿ ತಿಳಿಸಿದೆ.
ಈ ಸಾಂಕ್ರಾಮಿಕ ರೋಗದ ವಿರುದ್ಧ ಹೋರಾಡಲು ತಮ್ಮ ಪ್ರಾಣ ಮತ್ತು ಸುರಕ್ಷತೆಯನ್ನು ಪಣಕ್ಕಿಟ್ಟಿರುವ ಸದಸ್ಯ ಸಂಸ್ಥೆಗಳ ಪ್ರತಿಯೊಬ್ಬ ವ್ಯಕ್ತಿಯ ಬಗ್ಗೆ ನಾವು ತುಂಬಾ ಕೃತಜ್ಞರಾಗಿರುತ್ತೇವೆ. ಅವರ ಬಗ್ಗೆ ಅಪಾರ ಗೌರವವನ್ನು ಹೊಂದಿದ್ದೇವೆ ಎಂದು ತಿಳಿಸಿದೆ.
ಹೆಚ್ಚುವರಿ 1,000 ಕೋಟಿ ರೂ. ನಿಧಿ ಘೋಷಣೆ : ಟಾಟಾ ಸನ್ಸ್ ಕೋವಿಡ್-19 ಸಂಬಂಧಿತ ಚಟುವಟಿಕೆಗಳಿಗೆ ₹1,000 ಕೋಟಿ ನೀಡಲಿದೆ. ಟಾಟಾ ಟ್ರಸ್ಟ್‌ಗಳು ಸರ್ಕಾರದ ಜೊತೆ ಸೇರಿ ಕೆಲಸ ಮಾಡಲಿವೆ. ಅಗತ್ಯ ವೆಂಟಿಲೇಟರ್‌ಗಳನ್ನು ನಾವೇ ತಯಾರಿಸುತ್ತೇವೆ. ಶೀಘ್ರದಲ್ಲೇ ಅವುಗಳನ್ನು ಭಾರತದಲ್ಲಿ ಉತ್ಪಾದಿಸಲು ಸಜ್ಜಾಗುತ್ತಿದ್ದೇವೆ ಎಂದು ಮತ್ತೊಂದು ಪ್ರಕಟಣೆಯಲ್ಲಿ ತಿಳಿಸಿದೆ.