ನವದೆಹಲಿ: ಇ-ಟಿಕೆಟ್, ತತ್ಕಾಲ್ ಮುಂಗಡ ಟಿಕೆಟ್ ಕಾಯ್ದಿರಿಸುವಿಕೆ ಸೇರಿದಂತೆ ಇತರೆ ಟಿಕೆಟ್ ಬುಕ್ಕಿಂಗ್ ದುರ್ಬಳಕೆ ಮಾಡಿಕೊಂಡು ಅಕ್ರಮ ದಂಧೆ ನಡೆಸುತ್ತಿದ್ದ ದಲ್ಲಾಳಿಗಳ ಜಾಲವನ್ನು ರೈಲ್ವೆ ಸುರಕ್ಷಾ ದಳ (ಆರ್‌ಪಿಎಫ್) ಭೇದಿಸಿದೆ. ಟಿಕೆಟ್ ಅಕ್ರಮದಿಂದ ಬಂದ ಹಣದಲ್ಲಿ ಭಯೋತ್ಪಾದಕರಿಗೆ ಆರ್ಥಿಕ ನೆರವು ನೀಡಲಾಗುತ್ತಿತ್ತು ಎಂಬ ಆಘಾತಕಾರಿ ವಿಷಯ ಬೆಳಕಿಗೆ ಬಂದಿದೆ.
ರೈಲ್ವೆಯಲ್ಲಿನ ಅಕ್ರಮ ಇ-ಟಿಕೆಟ್ ಬುಕ್ಕಿಂಗ್ ದಂಧೆಗೆ ಸಂಬಂಧಿಸಿದಂತೆ ಆರ್‌ಪಿಎಫ್, ಅನಧಿಕೃತ ಇ-ಟಿಕೆಟ್ ದಂಧೆಯಲ್ಲಿ ನಿರತನಾಗಿದ್ದ ಜಾರ್ಖಂಡ್ ಮೂಲದ ಸಾಫ್ಟ್‌ವೇರ್ ಡೆವಲಪರ್ ಆಗಿರುವ ಗುಲಾಮ್ ಮುಸ್ತಫಾ (26) ನನ್ನು ಒಡಿಶಾದ ಭುವನೇಶ್ವರನಲ್ಲಿ ಬಂಧಿಸಿದೆ. ಬಂಧಿತ ಆರೋಪಿಯು ಭಯೋತ್ಪಾದಕರಿಗೆ ಹಣಕಾಸು ನೆರವು ನೀಡುತ್ತಿರಬಹುದೆಂದು ಶಂಕಿಸಲಾಗಿದೆ. ಈ ದಂಧೆಯಲ್ಲಿ ಕರ್ನಾಟಕ ಓರ್ವ ಆರೋಪಿಯೂ ಶಾಮಿಲಾಗಿದ್ದಾನೆ ಎಂದು ಆರ್ಪಿಎಫ್ನ ಡಿ ಜಿ ಅರುಣ್ ಕುಮಾರ್ ಸುದ್ದಿಗೋಷ್ಟಿಯಲ್ಲಿ ತಿಳಿಸಿದ್ದಾರೆ.
ಮುಸ್ತಫಾ ಬಳಿ 563 ವೈಯಕ್ತಿಕ ಐಆಆರ್ಸಿಟಿಸಿ ಐಡಿಗಳಿವೆ. 2,400 ಎಸ್ಬಿಐ ಶಾಖೆಗಳ ಮಾಹಿತಿ ಮತ್ತು 600 ಪ್ರಾದೇಶಿಕ ಗ್ರಾಮೀಣ ಬ್ಯಾಂಕ್ಗಳ ಪಟ್ಟಿಯನ್ನು ಹೊಂದಿದ್ದಾರೆ. ಅಲ್ಲಿ ಅವರು ಖಾತೆಗಳನ್ನು ಹೊಂದಿದ್ದಾರೆ ಎಂದು ಶಂಕಿಸಿ ಈ ಬಗ್ಗೆ ವಿಚಾರಣೆ ನಡೆಸಲಾಗುತ್ತಿದೆ ಎಂದು ಡಿಜಿ ಅರುಣ್ ಕುಮಾರ್ ಮಾಹಿತಿ ನೀಡಿದ್ದಾರೆ.
ಕಳೆದ 10 ದಿನಗಳಿಂದ ಐಬಿ, ಸ್ಪೆಷಲ್ ಬ್ಯೂರೋ, ಇಡಿ, ಎನ್‌ಐಎ, ಕರ್ನಾಟಕ ಪೊಲೀಸರು ಮುಸ್ತಫಾ ಅವರನ್ನು ವಿಚಾರಣೆ ನಡೆಸಿದ್ದಾರೆ. ಮನಿ ಲಾಂಡರಿಂಗ್ ಮತ್ತು ಭಯೋತ್ಪಾದಕ ಕೃತ್ಯಗಳಿಗೆ ಹಣಕಾಸಿನ ನೆರವಿನ ಆಯಾಮಗಳನ್ನು ಶಂಕಿಸಿ ತನಿಖೆ ನಡೆಸಲಾಗುತ್ತಿದೆ ಎಂದು ಅವರು ತಿಳಿಸಿದ್ದಾರೆ.
ಹಮೀದ್ ಅಶ್ರಫ್ ಎಂಬುವನೇ ದಂಧೆ ಹಿಂದಿನ ಮಾಸ್ಟರ್ ಮೈಂಡ್ ಆಗಿದ್ದು, ಸಾಫ್ಟ್‌ವೇರ್ ಡೆವಲಪರ್ ಕೂಡ ಆಗಿದ್ದಾನೆ. ಈತ ತಿಂಗಳಿಗೆ 10-15 ಕೋಟಿ ರೂ. ಆದಾಯ ಗಳಿಸುತ್ತಿದ್ದು, 2019ರಲ್ಲಿ ಗೊಂಡಾ ಶಾಲೆಯ ಮೇಲಿನ ಬಾಂಬ್ ಸ್ಫೋಟದಲ್ಲೂ ಭಾಗಿಯಾಗಿದ್ದ. ಈಗ ದುಬೈಗೆ ಪರಾರಿ ಆಗಿರಬಹುದು ಎಂದು ಕುಮಾರ್ ಶಂಕೆ ವ್ಯಕ್ತಪಡಿಸಿದ್ದಾರೆ.
ಕೃತ್ಯ ಬಯಲಾಗಿದ್ದು ಹೇಗೆ?
2017ರಲ್ಲಿ ಇ-ಟಿಕೆಟ್ ಬುಕ್ಕಿಂಗ್‌ಗಾಗಿ ಐಆರ್‌ಸಿಟಿಸಿನಿಂದ ಆರೋಪಿ ಮುಸ್ತಫಾ ಏಜೆಂಟ್ ಐಡಿ ಪಡೆದಿದ್ದ. ತಾನೇ ನೂರಾರು ನಕಲಿ ಐಡಿಗಳನ್ನು ಸೃಷ್ಟಿಸಿಕೊಂಡು, ಐಆರ್‌ಸಿಟಿಸಿ ವೆಬ್‌ಸೈಟ್ ಹ್ಯಾಕ್ ಮಾಡಿ ಟಿಕೆಟ್ ಬುಕಿಂಗ್ ಸಾಫ್ಟ್‌ವೇರ್ ಅನ್ನು ನಕಲು ಮಾಡಿದ್ದ. ಹೀಗೆ ನಕಲು ಮಾಡಿದ ಸಾಫ್ಟ್‌ವೇರ್ ಮತ್ತು ನಕಲಿ ಐಡಿಗಳ ನೆರವಿನಿಂದ ದಿನಾಲು ಸಾವಿರಾರು ಟಿಕೆಟ್‌ಗಳನ್ನು ಬುಕ್ ಮಾಡಿ ಮಾರಾಟ ಮಾಡುತ್ತಿದ್ದ. ಈ ಬಗ್ಗೆ ತನಿಖೆ ನಡೆಸಿದ ರೈಲ್ವೆ ಸುರಕ್ಷಾ ದಳ ಮುಸ್ತಾಫ ಸೇರಿದಂತೆ ಕರ್ನಾಟಕ ಮೂಲದ ವ್ಯಕ್ತಿಯನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿದ್ದಾರೆ.
ಈ ಜಾಲವು ರೈಲ್ವೆ ವೆಬ್‌ಸೈಟ್ ಅನ್ನು ಹ್ಯಾಕ್ ಮಾಡಿ ಟಿಕೆಟ್ ಬುಕ್ಕಿಂಗ್ ಸಾಫ್ಟ್‌ವೇರ್ ನಕಲು ಮಾಡಿದೆ. ಇದರಿಂದ ಭಾರತೀಯ ರೈಲ್ವೆಗೆ ಸಾವಿರಾರು ಕೋಟಿ ರೂ. ನಷ್ಟವಾಗಿದೆ. ಅನಧಿಕೃತ ಇ-ಟಿಕೆಟ್ ಬುಕಿಂಗ್ ಮೂಲಕ ಗಳಿಸಿದ ಲಾಭವನ್ನು ಹವಾಲಾ ಮೂಲಕ ದುಬೈ, ಪಾಕಿಸ್ತಾನ ಮತ್ತು ಬಾಂಗ್ಲಾಗೆ ರವಾನಿಸಲಾಗುತ್ತಿದೆ. ಭಾರತ ವಿರೋಧಿ ಕೃತ್ಯಗಳಿಗೆ ಈ ಹಣವನ್ನು ಬಳಸಿಕೊಳ್ಳಲಾಗುತ್ತಿದೆ ಎಂಬುದು ತನಿಖೆಯ ಮೂಲಕ ಬಹಿರಂಗವಾಗಿದೆ ಎನ್ನಲಾಗ್ತಿದೆ.