ನವದೆಹಲಿ: ಪರಿಸರ ಸಂರಕ್ಷಣೆ ಉದ್ದೇಶದಿಂದ ರೈಲ್ವೆಯಲ್ಲಿ ಉತ್ಪತ್ತಿಯಾಗುವ ಪ್ಲಾಸ್ಟಿಕ್ ತ್ಯಾಜ್ಯದಿಂದ ಇಂಧನ ಉತ್ಪಾದನೆ ಮಾಡುವ ಸ್ಥಾವರವನ್ನು ಪೂರ್ವ ಕರಾವಳಿ ರೈಲ್ವೆಯು ಸರ್ಕಾರದ ಅನುದಾನದಲ್ಲಿ ಇದೇ ಪ್ರಥಮ ಬಾರಿಗೆ ಸ್ಥಾಪಿಸಿದೆ.
ಪೂರ್ವ ಕರಾವಳಿ ರೈಲ್ವೆ ವ್ಯಾಪ್ತಿಯಲ್ಲಿನ ಸ್ಥಾವರವು 24 ಗಂಟೆಗಳಲ್ಲಿ ಇ - ವೆಸ್ಟ್ ಮತ್ತು ಪ್ಲಾಸ್ಟಿಕ್ ತ್ಯಾಜ್ಯವನ್ನು ಲಘು ಡೀಸೆಲ್ ಇಂಧನವಾಗಿ ಪರಿವರ್ತಿಸುತ್ತದೆ. 'ಪಾಲಿಕ್ರಾಕ್' ಎಂಬ ಪೇಟೆಂಟ್ ತಂತ್ರಜ್ಞಾನ ಪ್ಲಾಸ್ಟಿಕ್ ತ್ಯಾಜ್ಯವನ್ನು ಇಂಧನವಾಗಿ ಪರಿವರ್ತಿಸುತ್ತಿದೆ. ಈ ಎನರ್ಜಿ ಪ್ಲಾಂಟ್ ಭಾರತೀಯ ರೈಲ್ವೆಯಲ್ಲಿ ಮೊದಲನೆಯದ್ದಾಗಿದ್ದು, ದೇಶದಲ್ಲಿ ಇದು ನಾಲ್ಕನೆಯದಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪ್ಲಾಸ್ಟಿಕ್ ತ್ಯಾಜ್ಯದಿಂದ ಇಂಧನ ತಯಾರಿಸುವ ಸ್ಥಾವರವನ್ನು ದೇಶದಲ್ಲಿ ಮೊದಲನೇ ಬಾರಿಗೆ ಸ್ಥಾಪಿಸಿದ್ದು ಇನ್ಪೋಸಿಸ್. 2011ರಲ್ಲಿ ಇನ್ಫಿ 50 ಕೆಜಿ ಸಾಮರ್ಥ್ಯದ ಸ್ಥಾವರವನ್ನು ಬೆಂಗಳೂರಿನಲ್ಲಿ ಸ್ಥಾಪಿಸಿತ್ತು. ಬಳಿಕ 2014ರಲ್ಲಿ ದೆಹಲಿಯ ಮೋತಿ ಬಾಗ್ನಲ್ಲಿ ಹಾಗೂ 2019ರಲ್ಲಿ ಹಿಂಡಾಲ್ಕೊದಲ್ಲಿ ಬೇರೆ ಕಂಪನಿಗಳು ಸ್ಥಾಪನೆ ಮಾಡಿದವು.
'ಪಾಲಿಕ್ರಾಕ್' ವಿಶ್ವದ ಮೊದಲ ಪೇಟೆಂಟ್ ಪಡೆದ ತಂತ್ರಜ್ಞಾನವಾಗಿದೆ. ಅನೇಕ ಫೀಡ್‌ಸ್ಟಾಕ್‌ಗಳನ್ನು ಹೈಡ್ರೋಕಾರ್ಬನ್ ದ್ರವ ಇಂಧನಗಳಾಗಿ, ಅನಿಲ, ಇಂಗಾಲ ಮತ್ತು ನೀರಾಗಿ ಪರಿವರ್ತಿಸುತ್ತದೆ. ಕ್ಯಾರೇಜ್ ರಿಪೇರಿ ಕಾರ್ಯಾಗಾರದಲ್ಲಿ ಉತ್ಪತ್ತಿಯಾಗುವ ಸಾಕಷ್ಟು ನಾನ್ ಫೆರೊಸ್ ತ್ಯಾಜ್ಯಕ್ಕೆ ಯಾವುದೇ ವಿಲೇವಾರಿ ಹೊಂದಿರಲಿಲ್ಲ. ಇದರಿಂದ ಪರಿಸರಕ್ಕೆ ಮಾರಕವಾಗಿತ್ತು. ಈಗ ಇದನ್ನು ಲಘು ಇಂಧನವಾಗಿ ಮಾರ್ಪಡಿಸುತ್ತಿದ್ದೇವೆ ಎಂದು ಪೂರ್ವ ಕರಾವಳಿ ರೈಲ್ವೆ ವಕ್ತಾರ ಜೆ.ಪಿ. ಮಿಶ್ರಾ ಹೇಳಿದರು.
ಸ್ಥಾವರವು ಸುಮಾರು 450 ಸೆಲ್ಸಿಯಸ್ ಡಿಗ್ರಿಗಳಲ್ಲಿ ಕಾರ್ಯನಿರ್ವಹಿಸುತ್ತದೆ. ಇತರ ಘಟಕಗಳಿಗೆ ಹೋಲಿಸಿದರೆ ಇದು ಕಡಿಮೆ ತಾಪಮಾನದಾಗಿದೆ. ಮೂರು ತಿಂಗಳಲ್ಲಿ ಸುಮಾರು 2 ಕೋಟಿ ರೂ. ವೆಚ್ಚ ಮಾಡಿ ನಿರ್ಮಿಸಲಾಗಿದೆ. ಮಂಚೇಶ್ವರ ಕ್ಯಾರೇಜ್ ರಿಪೇರಿ ಕಾರ್ಯಾಗಾರ, ಕೋಚಿಂಗ್ ಡಿಪೋ ಮತ್ತು ಭುವನೇಶ್ವರ ರೈಲ್ವೆ ನಿಲ್ದಾಣದಲ್ಲಿ ಉತ್ಪತಿಯಾಗುವ ತ್ಯಾಜ್ಯ ಈ ಸ್ಥಾವರಕ್ಕೆ ಸರಬರಾಜು ಆಗಲಿದೆ. ಪ್ರತಿ ಬ್ಯಾಚ್‌ಗೆ 500 ಕೆಜಿ ತ್ಯಾಜ್ಯ ಸ್ವೀಕರಿಸುತ್ತದೆ ಎಂದು ವಿವರಿಸಿದರು.