ಮುಂಬೈ: ಅಕ್ರಮ ಹಣ ವರ್ಗಾವಣೆ ಪ್ರಕರಣದ ಆರೋಪಿ ಯೆಸ್ ಬ್ಯಾಂಕ್ ಸಂಸ್ಥಾಪಕ ರಾಣಾ ಕಪೂರ್ ಅವರಿಗೆ ಜಾಮೀನು ನೀಡಲು ಬಾಂಬೆ ಹೈಕೋರ್ಟ್ ನಿರಾಕರಿಸಿದೆ.
ಯೆಸ್ ಬ್ಯಾಂಕ್ ಹಗರಣದಡಿ ಕಪೂರ್ ಅವರನ್ನು ಕಳೆದ ಮಾರ್ಚ್‌ನಲ್ಲಿ ಜಾರಿ ನಿರ್ದೇಶನಾಲಯ (ಇಡಿ) ಬಂಧಿಸಿತ್ತು.
ಹಗರಣಕ್ಕೊಳಗಾದ ದಿವಾನ್ ಹೌಸಿಂಗ್ ಫೈನಾನ್ಸ್ ಲಿಮಿಟೆಡ್ಗೆ (ಡಿಎಚ್‌ಎಫ್‌ಎಲ್) ಸಂಬಂಧಿಸಿದ ಸಂಸ್ಥೆಯಿಂದ ಪಡೆದ 600 ಕೋಟಿ ರೂ. ಮೊತ್ತದ ಪ್ರಕರಣದಡಿ ಇಡಿ, ಕಪೂರ್, ಅವರ ಪತ್ನಿ ಮತ್ತು ಮೂವರು ಪುತ್ರಿಯರ ವಿರುದ್ಧ ತನಿಖೆ ನಡೆಸುತ್ತಿದೆ.
ಇದನ್ನೂ ಓದಿ: TRP ಹಗರಣ: ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಬಾರ್ಕ್ ಮಾಜಿ ಸಿಇಒ
ಕಳೆದ ವರ್ಷ ಜುಲೈನಲ್ಲಿ ಮುಂಬೈನ ವಿಶೇಷ ನ್ಯಾಯಾಲಯವು ಕಪೂರ್ ಅವರ ಜಾಮೀನು ಅರ್ಜಿಯನ್ನು ತಿರಸ್ಕರಿಸಿತ್ತು. ನಂತರ ಅವರು ಹೈಕೋರ್ಟ್ ಕದ ತಟ್ಟಿದ್ದರು. ಇಲ್ಲಿಯೂ ಅವರಿಗೆ ಹಿನ್ನಡೆಯಾಗಿದೆ.
ನ್ಯಾಯಮೂರ್ತಿ ಪಿ.ಡಿ. ನಾಯಕ್ ನೇತೃತ್ವದ ಏಕೈಕ ನ್ಯಾಯಪೀಠಕ್ಕೆ ಕಪೂರ್ ಅವರ ವಕೀಲ ಹರೀಶ್ ಸಾಳ್ವೆ, 600 ಕೋಟಿ ರೂ. ತಮ್ಮ ಕಂಪನಿಯು ಪಡೆದ ಸಾಲವೇ ಹೊರತು ಕಿಕ್‌ಬ್ಯಾಕ್ ಅಲ್ಲ ಎಂದು ಪೀಠದ ಗಮನಕ್ಕೆ ತಂದರು. ಆದರೆ ಜಾಮೀನು ಅರ್ಜಿಯನ್ನು ಇಡಿ ಪರ ವಕೀಲ ಹಿತೇನ್ ವೆನೆಗಾಂವ್ಕರ್ ವಿರೋಧಿಸಿದರು. ಈ ಕಂಪನಿಯು ಕಪೂರ್ ಅವರ ಪುತ್ರಿಯರ ಸಹ-ಮಾಲೀಕತ್ವದಲ್ಲಿದೆ ಎಂದು ತಿಳಿಸಿದರು.
ಮನಿ ಲಾಂಡರಿಂಗ್ ತಡೆ ಕಾಯ್ದೆಯ (ಪಿಎಂಎಲ್‌ಎ) ನಿಬಂಧನೆಗಳ ಪ್ರಕಾರ ಕಪೂರ್‌ನನ್ನು ಇಡಿ ಬಂಧಿಸಿದೆ. ಕೇಂದ್ರೀಯ ತನಿಖಾ ದಳ (ಸಿಬಿಐ) ಕೂಡ ಈ ಪ್ರಕರಣದ ತನಿಖೆ ನಡೆಸುತ್ತಿದೆ.