ನ್ಯೂಯಾರ್ಕ್( ಅಮೆರಿಕ): ಟಿಕ್ಟಾಕ್ ಕಳೆದ ವರ್ಷ ತನ್ನ ಬ್ರ್ಯಾಂಡ್ ಮೌಲ್ಯದಲ್ಲಿ ಮೂರು ಪಟ್ಟು ಹೆಚ್ಚಳ ಮಾಡಿಕೊಂಡಿದೆ. ಈ ಮೂಲಕ ಅದು ವಿಶ್ವದ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಬ್ರ್ಯಾಂಡ್ ಆಗಿ ಮಾರ್ಪಾಡಾಗಿದೆ. 215 ರಷ್ಟು ಬೆಳವಣಿಗೆಯೊಂದಿಗೆ, ಅದರ ಬ್ರ್ಯಾಂಡ್ ಮೌಲ್ಯವು 2021 ರಲ್ಲಿ $ 18.7 ಶತಕೋಟಿಯಿಂದ $ 59.0 ಶತಕೋಟಿ ಡಾಲರ್ಗೆ ಹೆಚ್ಚಾಗಿದೆ.
ವಿಶ್ವದ ಟಾಪ್ 500 ಅತ್ಯಮೂಲ್ಯ ಬ್ರಾಂಡ್‌ಗಳಲ್ಲಿ 18 ನೇ ಸ್ಥಾನವನ್ನು ಪಡೆದುಕೊಂಡಿರುವ ಟಿಕ್ಟಾಕ್ ಬ್ರ್ಯಾಂಡ್ ಫೈನಾನ್ಸ್ ಗ್ಲೋಬಲ್ 500- 2022 ಪಟ್ಟಿಯಲ್ಲಿ ಹೊಸ ಪ್ರವೇಶ ಪಡೆದುಕೊಂಡು ಮಿಂಚಿದೆ.
ಸ್ನ್ಯಾಪ್ ಚಾಟ್ ಈಗ ಪ್ರಮುಖ ಬ್ರ್ಯಾಂಡ್: ಟಿಕ್ಟಾಕ್ ನಂತರದ ಪ್ರಮುಖ ಬ್ರ್ಯಾಂಡ್ ಅಂದರೆ ಅದು, ಸ್ನ್ಯಾಪ್ ಚಾಟ್, ಈ ಕಂಪನಿ ಶೇ 184 ರಷ್ಟು ಬೆಳವಣಿಗೆ ಕಾಣುವ ಮೂಲಕ 6.6 ಬಿಲಿಯನ್ ಡಾಲರ್ ಮೌಲ್ಯವನ್ನು ಹೊಂದಿದೆ. ಇನ್ನು ದಕ್ಷಿಣ ಕೊರಿಯಾದ ಇಂಟರ್ನೆಟ್ ಬ್ರ್ಯಾಂಡ್ ಕಾಕೋ ಶೇ 161 ರಷ್ಟು ಬೆಳವಣಿಗೆ ಕಾಣುವ ಮೂಲಕ ಸುಮಾರು 4.7 ಬಿಲಿಯನ್ ಡಾಲರ್ ಮೌಲ್ಯವನ್ನು ಹೊಂದಿದೆ. ಈ ಮೂಲಕ ಟಿಕ್ಟಾಕ್ಗೆ ಟಕ್ಕರ್ ಕೊಡುತ್ತಿದೆ.
ಕಳೆದ 9 ತಿಂಗಳಲ್ಲಿ ಸ್ನ್ಯಾಪ್ ಚಾಟ್ ಶೇ 77 ರಷ್ಟು ಆದಾಯವನ್ನು ಹೆಚ್ಚಿಸಿಕೊಂಡಿದ್ದು, ಶಾರ್ಟ್ ವಿಡಿಯೋಗಳು ಇದರ ಜೀವಾಳವಾಗಿದೆ. ಇನ್ನುಳಿದಂತೆ ಮೀಡಿಯಾ ಫೀಲ್ಡ್ನಲ್ಲಿ ಡಿಸ್ನಿ ಪ್ರಮುಖ ಬ್ರ್ಯಾಂಡ್ ಆಗಿ ಬೆಳವಣಿಗೆ ಸಾಧಿಸುತ್ತಿದೆ. ಶೇ 11 ರಷ್ಟು ಬೆಳವಣಿಗೆ ಸಾಧಿಸಿರುವ ಈ ಕಂಪನಿ ಸುಮಾರು 57 ಬಿಲಿಯನ್ ಡಾಲರ್ ಮಾರುಕಟ್ಟೆ ಮೌಲ್ಯವನ್ನು ಹೊಂದಿದೆ.
ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ
ನೆಟ್ಫ್ಲಿಕ್ಸ್ನಿಂದಲೂ ಅಮೋಘ ಸಾಧನೆ: ಇನ್ನು ನೆಟ್ಫ್ಲಿಕ್ಸ್ ಶೇ 18ರಷ್ಟು ಬೆಳವಣಿಗೆ ದಾಖಲಿಸುವ ಮೂಲಕ ಮಾರುಕಟ್ಟೆ ಮೌಲ್ಯವನ್ನು 29.4 ಶತಕೋಟಿ ಡಾಲರ್ಗೆ ಹೆಚ್ಚಿಸಿಕೊಂಡಿದೆ. ಮತ್ತೊಂದು ಮಾಧ್ಯಮದ ಬ್ರ್ಯಾಂಡ್ ಅದು ಯೂ ಟ್ಯೂಬ್, ಯೂಟ್ಯೂಬ್ ಶೇ 38 ರಷ್ಟು ಬೆಳವಣಿಗೆ ಸಾಧಿಸುವ ಮೂಲಕ 23.9 ಶತಕೋಟಿ ಡಾಲರ್ ವ್ಯವಹಾರ ನಡೆಸಿದೆ.
ಮತ್ತೊಂದು ಪ್ರಮುಖ ಬ್ರ್ಯಾಂಡೆಡ್ ಕಂಪನಿ ಅಂದರೆ ಅದು ಸ್ಪೂಟಿಪೈ. ಈ ಕಂಪನಿ ಕಳೆದ ಸಾಲಿನಲ್ಲಿ ಶೇ 13 ರಷ್ಟು ಬೆಳವಣಿಗೆ ಕಾಣುವ ಮೂಲಕ ತನ್ನ ಮಾರುಕಟ್ಟೆ ಮೌಲ್ಯವನ್ನು 6.3 ಬಿಲಿಯನ್ ಡಾಲರ್ಗೆ ಏರಿಕೆ ಮಾಡಿಕೊಂಡಿದೆ.
ಸಾಂಪ್ರದಾಯಿಕ ಮಾಧ್ಯಮಗಳ ಮೌಲ್ಯದಲ್ಲಿ ಸತತ ಕುಸಿತ: ವಿಶೇಷ ಎಂದರೆ ಸಾಂಪ್ರದಾಯಿಕ ಮಾಧ್ಯಮಗಳು ಸತತವಾಗಿ ತಮ್ಮ ಮೌಲ್ಯವನ್ನು ಕಳೆದುಕೊಳ್ಳುತ್ತಾ ಸಾಗಿದೆ. ಆದರೆ, ಸೋಷಿಯಲ್ ಮೀಡಿಯಾ ಪ್ಲಾಟ್ಫಾರ್ಮ್ಗಳು, ಲೈವ್ ಸ್ಟ್ರೀಮಿಂಗ್ಗಳು ತಮ್ಮ ಮೌಲ್ಯವನ್ನು ದಿನದಿಂದ ದಿನಕ್ಕೆ ಹೆಚ್ಚಿಸಿಕೊಳ್ಳುತ್ತಲೇ ಸಾಗಿವೆ.
ಬ್ರ್ಯಾಂಡ್ ಫೈನಾನ್ಸ್ ಗ್ಲೋಬಲ್ 500 ರ ಶ್ರೇಯಾಂಕದಲ್ಲಿ ತಂತ್ರಜ್ಞಾನ ಕಂಪನಿಗಳ ಮೇಲುಗೈ: ಇನ್ನು ತಂತ್ರಜ್ಞಾನ ಕ್ಷೇತ್ರದ ಕಂಪನಿಗಳ ಒಟ್ಟಾರೆ ಬೆಳವಣಿಗೆ ಆಶಾದಾಯವಾಗಿದೆ. ಬ್ರ್ಯಾಂಡ್ ಫೈನಾನ್ಸ್ ಗ್ಲೋಬಲ್ 500 ರ ಶ್ರೇಯಾಂಕದಲ್ಲಿ ಟೆಕ್ ಕಂಪನಿಗಳು ಅತ್ಯಂತ ಮೌಲ್ಯಯುತ ಎಂದು ಸಾಬೀತಾಗಿದೆ. ಈ ಕಂಪನಿಗಳ ಸಂಚಿತ ಬ್ರ್ಯಾಂಡ್ ಮೌಲ್ಯವು ಸುಮಾರು $1.3 ಟ್ರಿಲಿಯನ್ ಆಗಿದೆ.
ಒಟ್ಟಾರೆಯಾಗಿ 50 ಟೆಕ್ ಬ್ರ್ಯಾಂಡ್‌ಗಳು ಶ್ರೇಯಾಂಕದಲ್ಲಿ ಪ್ರಮುಖ ಭೂಮಿಕೆಯನ್ನು ನಿಭಾಯಿಸಿವೆ. ಆಪಲ್, ಮೈಕ್ರೋಸಾಫ್ಟ್ (ಬ್ರಾಂಡ್ ಮೌಲ್ಯ $184.2 ಬಿಲಿಯನ್) ಮತ್ತು ಸ್ಯಾಮ್‌ಸಂಗ್ ಗ್ರೂಪ್ (ಬ್ರ್ಯಾಂಡ್ ಮೌಲ್ಯ $107.3 ಬಿಲಿಯನ್) ಜೊತೆಗೆ ಇತರ ಕಂಪನಿಗಳು ಪಟ್ಟಿಯಲ್ಲಿ ಪಾರಮ್ಯ ಮೆರೆದಿವೆ.
ಇನ್ನು ಹ್ಯುವಾಯ್ ವಿಶ್ವದ 10ನೇ ಟಾಪ್ ಬ್ರ್ಯಾಂಡ್ ಆಗಿ ಗುರುತಿಸಿಕೊಂಡಿದೆ. ಶೇ 29ರಷ್ಟು ಬೆಳವಣಿಗೆ ಸಾಧಿಸಿರುವ Huawei $71.2 ಶತಕೋಟಿ ಡಾಲರ್ ಮಾರುಕಟ್ಟೆ ಮೌಲ್ಯವನ್ನು ಹೊಂದಿದೆ.