ನವದೆಹಲಿ: ಹೋಂಡಾ ಇಂಡಿಯಾ ಕಂಪನಿಯು ಭಾರತೀಯ ಮಾರುಕಟ್ಟೆಗೆ ಭರತ್ ಸ್ಟೇಜ್- 6 (ಬಿಎಸ್-6) ತಂತ್ರಜ್ಞಾನದ ಆಕ್ಟಿವಾ-125 BS-VI ಸ್ಕೂಟರನ್ನು ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ಅವರು ಬಿಡುಗಡೆ ಮಾಡಿದರು.
ರಾಷ್ಟ್ರದಲ್ಲಿ ಭಾರತ್ ಸ್ಟೇಜ್ 6 (ಬಿಎಸ್-6) ವಾಹನಗಳ ಮಾರಾಟವನ್ನು 2020ರ ಏಪ್ರಿಲ್ 1ರಿಂದ ಕಡ್ಡಾಯಗೊಳಿಸುವಂತೆ ಸುಪ್ರೀಂಕೋರ್ಟ್ನ ಜಸ್ಟೀಸ್ ಮದನ್ ಬಿ. ಲೋಕೂರ್ ಅವರ ನೇತೃತ್ವದ ತ್ರಿಸದಸ್ಯ ಪೀಠ ಕಳೆದ ವರ್ಷ ಆದೇಶ ನೀಡಿತ್ತು. ಕೇಂದ್ರ ಸರ್ಕಾರ ಸಹ ಬಿಎಸ್-4 ವಾಹನಗಳನ್ನು ಹಂತ- ಹಂತವಾಗಿ ತಗ್ಗಿಸುವಂತೆ ಆಟೋಮೊಬೈಲ್ ಕಂಪನಿಗಳಿಗೆ ತಿಳಿಸಿತ್ತು.
ಇದರ ಭಾಗವಾಗಿ ಹೋಂಡಾ ಇಂಡಿಯಾ, ಭರತ್ ಸ್ಟೇಜ್- 6 ತಂತ್ರಜ್ಞಾನದ ಆಕ್ಟಿವಾ- 125 ಸ್ಕೂಟರ್ ಅನ್ನು ಬಿಡುಗಡೆ ಮಾಡಿದೆ. ಸ್ಟ್ಯಾಂಡರ್ಡ್, ಆಲೋ ಮತ್ತು ಡಿಲಕ್ಸ್‌ನಂತಹ ಮೂರು ಶೈಲಿಯಲ್ಲಿ ರಸ್ತೆಗೆ ಇಳಿದಿದೆ. ರೆಬೆಲ್ ರೆಡ್ ಮೆಟಾಲಿಕ್, ಮಿಡ್ನೈಟ್ ಬ್ಲೂ ಮೆಟಾಲಿಕ್, ಹೆವಿ ಗ್ರೇ ಮೆಟಾಲಿಕ್ ಮತ್ತು ಪರ್ಲ್ ಬಿಳಿ ಬಣ್ಣದಲ್ಲಿವೆ. ಸ್ಟ್ಯಾಂಡರ್ಡ್ ಶೈಲಿಯ ಆಕ್ಟಿವಾ ₹ 67,490, ಆಲೋ ಮತ್ತು ಡಿಲಕ್ಸ್ ಕ್ರಮವಾಗಿ ₹ 70,990 ಹಾಗೂ ₹ 74,490ಕ್ಕೆ ಲಭ್ಯವಾಗಲಿವೆ.
ಸ್ಕೂಟರ್ ಬಿಡುಗಡೆಗೊಳಿಸಿ ಮಾತನಾಡಿದ ನಿತಿನ್ ಗಡ್ಕರಿ, ಹೆಚ್ಚುತ್ತಿರುವ ವಾಹನ ಮಾಲಿನ್ಯದಿಂದಾಗಿ ಪರಿಸರ ಸವಾಲುಗಳು ಎದುರಾಗುತ್ತಿವೆ. ಹಾಗಾಗಿ ವಾಹನ ಕ್ಷೇತ್ರದಲ್ಲಿ ನವೀನ ತಂತ್ರಜ್ಞಾನಗಳನ್ನು ತರುವಂತೆ ತಯಾರಿಕರಿಗೆ ಕರೆ ನೀಡಿದರು.