ನವದೆಹಲಿ: ಕಳೆದ ಕೆಲವು ತಿಂಗಳಿನಿಂದ ಭಾರತದಲ್ಲಿ ಆಟೋ ಉದ್ಯಮಕ್ಕೆ ಬಲವಾಗಿ ಹೊಡೆತ ನೀಡಿರುವ ಆರ್ಥಿಕ ಹಿಂಜರಿತ ಇನ್ನೂ ಹಳಿಗೆ ಮರಳಿಲ್ಲ. ಈ ಅವಧಿಯಲ್ಲಿ ಹಿನ್ನಡೆ ಅನುಭವಿಸಿರುವ ಪ್ರಮುಖ ಕಾರು ಉತ್ಪಾದನಾ ಸಂಸ್ಥೆಗಳು ಜನವರಿಯಿಂದ ಬೆಲೆ ಹೆಚ್ಚಳಕ್ಕೆ ಮುಂದಾಗಿವೆ.
ಭಾರತದ ಅತಿದೊಡ್ಡ ಕಾರು ಉತ್ಪಾದನಾ ಸಂಸ್ಥೆ ಮಾರುತಿ ಸುಜುಕಿ ಈಗಾಗಲೇ ಜನವರಿಯಿಂದ ಬೆಲೆ ಹೆಚ್ಚಳ ಮಾಡುವುದಾಗಿ ಘೊಷಿಸಿದೆ. ಇದರ ಬೆನ್ನಲ್ಲೆ ಇನ್ನುಷ್ಟು ಕಾರು ಕಂಪನಿಗಳ ಬೆಲೆ ಹೆಚ್ಚಳವನ್ನು ಪ್ರಕಟಿಸಿವೆ.
ನಿಸಾನ್ ಮೋಟಾರ್ ಇಂಡಿಯಾದ ಕಾರುಗಳು ಜನವರಿಯಿಂದ ಶೇ.5ರಷ್ಟು ತುಟ್ಟಿಯಾಗಲಿವೆ. ಉತ್ಪಾದನೆಯ ವೆಚ್ಚವನ್ನು ಸರಿದೂಗಿಸಲು ಬೆಲೆ ಹೆಚ್ಚಳಕ್ಕೆ ಮುಂದಾಗಿರುವುದಾಗಿ ನಿಸಾನ್ ಹೇಳಿದೆ.
ಇದರ ಜೊತೆಯಲ್ಲಿ ಟಾಟಾ ಮೋಟಾರ್ಸ್ ಹಾಗೂ ಹ್ಯುಂಡೈ ಕಾರುಗಳ ಬೆಲೆ ಹೊಸವರ್ಷದಿಂದ ದುಬಾರಿಯಾಗಲಿದೆ. ನಷ್ಟವನ್ನು ಸರಿದೂಗಿಸುವ ಹಾಗೂ ಉತ್ಪಾದನಾ ವೆಚ್ಚವನ್ನು ಸಮತೋಲನ ಮಾಡಲು ಈ ಎಲ್ಲ ಕಂಪನಿಗಳು ಬೆಲೆ ಏರಿಕೆಯ ಹಾದಿ ಹಿಡಿದಿವೆ.