ಅಹಮದಾಬಾದ್: ರೈಲ್ವೆ ಸಚಿವ ಪಿಯೂಷ್ ಗೋಯಲ್ ಅವರು, 'ಅಮೆಜಾನ್ ಭಾರತದ ಪರೋಪಕಾರಕ್ಕಾಗಿ ಹೂಡಿಕೆ ಮಾಡಲ್ಲ' ಎಂದು ಹೇಳಿಕೆ ನೀಡಿದ ಮರುದಿನವೇ ಯುಟರ್ನ್ ಹೊಡೆದಿದ್ದಾರೆ.
ಕಾನೂನುಗಳಿಗೆ ನಿಯಮ ಬದ್ಧವಾಗಿ ಹೂಡಿಕೆ ಮಾಡುವ ಎಲ್ಲ ವಿಧದ ವಹಿವಾಟುಗಳಿಗೆ ಸ್ವಾಗತವಿದೆ. ಆದರೆ, ಕೆಲವರು ಅಮೆಜಾನ್ ಬಗೆಗಿನ ನನ್ನ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಿಕೊಂಡು ಅದರ ವಿರುದ್ಧ ನಕeರಾತ್ಮಕವಾಗಿ ಮಾತನಾಡಿದ್ದೇನೆ ಎಂಬ ಅರ್ಥ ಕಲ್ಪಿಸುತ್ತಿದ್ದಾರೆ ಎಂದು ಸ್ಪಷ್ಟನೆ ನೀಡಿದ್ದಾರೆ.
ನಾನು ಹೇಳಿದ್ದು ಹೂಡಿಕೆಯು ನಿಯಮ ಮತ್ತು ಮಾರ್ಗಸೂಚಿಗಳಿಗೆ ಅನುಗುಣವಾಗಿ ಬರಬೇಕು ಎಂದಿದ್ದೆ. ಚಿಲ್ಲರೆ ವಿಭಾಗದಲ್ಲಿ ದೊಡ್ಡ ಮಟ್ಟದ ಹೂಡಿಕೆಯು 'ಲಕ್ಷ ಮತ್ತು ಕೋಟಿ ' ರೂ. ವಹಿವಾಟು ಹೊಂದಿರದ ಸಣ್ಣ ವ್ಯಾಪಾರಿಗಳಿಗೆ ತೊಂದರೆಯಾಗಬಾರದು ಎಂದು ಇಲ್ಲಿ ನಡೆದ ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಿ ಹೇಳಿದ್ದಾರೆ.
ನಾವು ಎಲ್ಲ ರೀತಿಯ ಹೂಡಿಕೆಗಳನ್ನು ಸ್ವಾಗತಿಸುತ್ತೇವೆ. ಕಾನೂನಿನ ವ್ಯಾಪ್ತಿಯಿಂದ ಹೊರಗೆ ಯಾವುದೇ ಹೂಡಿಕೆ ಮಾಡಿದರೆ ಅಗತ್ಯ ಕಾನೂನು ಪ್ರಕ್ರಿಯೆಗಳು ಅನುಸರಿಸುತ್ತವೆ ಎಂದು ಸಚಿವರು ಹೇಳಿದರು.
ನಮ್ಮ ದೇಶವು ಇ-ಕಾಮರ್ಸ್ ಉದ್ಯಮಕ್ಕೆ ಕೆಲವು ನಿಯಮಗಳನ್ನು ಹೊಂದಿದೆ. ಈ ನಿಯಮಗಳ ಪ್ರಕಾರ, ಬರುವ ಎಲ್ಲ ಹೂಡಿಕೆಗಳನ್ನು ನಾವು ಸ್ವಾಗತಿಸುತ್ತೇವೆ. ಇವುಗಳು ಭಾರತದ ಸಣ್ಣ ವ್ಯಾಪಾರಿಗಳಿಗೆ ಅನ್ಯಾಯದ ಸ್ಪರ್ಧೆ ಸೃಷ್ಟಿಸಬಾರದು. ಅವರಿಗೆ ಶೇಕಡ ಶೂನ್ಯ ಸಾಲ ಸಹ ಸಿಗುವುದಿಲ್ಲ. ಲಕ್ಷ ಮತ್ತು ಕೋಟಿ ರೂ. ವಹಿವಾಟು ಸಹ ಹೊಂದಿಲ್ಲ. ಅವರೆಲ್ಲ ಸಣ್ಣ ಬಂಡವಾಳದೊಂದಿಗೆ ವ್ಯಾಪಾರ ಮಾಡುತ್ತಾರೆ ಎಂದು ಗೋಯಲ್ ಹೇಳಿದರು.
ನನ್ನ ಹೇಳಿಕೆಯನ್ನು ವಿಶಾಲ ದೃಷ್ಟಿಕೋನದಿಂದ ನೋಡಬೇಕು. ಎಲ್ಲಾ ದೇಶಗಳು ವಿದೇಶಿ ಹೂಡಿಕೆಯನ್ನು ಸ್ವಾಗತಿಸುತ್ತವೆ. ಆದರೆ, ಅದು ಕಾನೂನಿನ ಚೌಕಟ್ಟಿನೊಳಗೆ ಇರಬೇಕು ಎಂದರು.