ನವದೆಹಲಿ : ಆಟೋಮೊಬೈಲ್ ಇಂಡಸ್ಟ್ರೀಸ್ ಮಾರುತಿ ಸುಜುಕಿ ಇಂಡಿಯಾ ಲಿಮಿಟೆಡ್ (ಎಂಎಸ್ಐಎಲ್) ಆಗ್ವಾ ಹೆಲ್ತ್‌ಕೇರ್ ಜೊತೆಗೆ ಒಪ್ಪಂದ ಮಾಡಿಕೊಂಡು ವೆಂಟಿಲೇಟರ್ ಹಾಗೂ ಮುಖಗವಸು ಉತ್ಪಾದನೆ ಮಾಡುವುದಾಗಿ ಶನಿವಾರ ಘೋಷಿಸಿದೆ.
ಭಾರತದಲ್ಲಿ ಕೊರೊನಾ ವೈರಸ್ ತುತ್ತಾಗುತ್ತಿರುವ ಸಂತ್ರಸ್ತರನ್ನು ಸಂರಕ್ಷಿಸಲು ಹಲವು ಉದ್ಯಮಿಗಳು ಸರ್ಕಾರದೊಂದಿಗೆ ಕೈಜೋಡಿಸುತ್ತಿದ್ದಾರೆ. ಕೇಂದ್ರ ಸರ್ಕಾರದ ಮನವಿ ಮೇರೆಗೆ ಎಂಎಸ್ಐಎಲ್ ವೆಂಟಿಲೇಟರ್, ಮಾಸ್ಕ್ ಸೇರಿದಂತೆ ಇತರೆ ಆರೋಗ್ಯ ಸಾಮಾಗ್ರಿಗಳನ್ನು ಉತ್ಪಾದಿಸಲು ಮುಂದಾಗಿದೆ.
ಈ ಒಪ್ಪಂದದ ಮೂಲಕ ತಿಂಗಳಿಗೆ 10,000 ಯುನಿಟ್‌ಗಳ ಉತ್ಪಾದನೆ ಮಾಡುವ ಉದ್ದೇಶವಿರಿಸಿಕೊಂಡಿದೆ. ಆಗ್ವಾ ಹೆಲ್ತ್‌ಕೇರ್ ಉತ್ಪಾದಿಸುವ ಮತ್ತು ಮಾರಾಟ ಮಾಡುವ ಎಲ್ಲಾ ವೆಂಟಿಲೇಟರ್‌ಗಳ ತಂತ್ರಜ್ಞಾನ, ಕಾರ್ಯಕ್ಷಮತೆ ಮತ್ತು ಸಂಬಂಧಿತ ವಿಷಯಗಳಿಗೆ ಹೆಲ್ತ್‌ಕೇರ್ ಜವಾಬ್ದಾರಿ ವಹಿಸಿಕೊಳ್ಳಲಿದೆ ಎಂದು ಕಂಪನಿ ಪ್ರಕಟಣೆಯಲ್ಲಿ ತಿಳಿಸಿದೆ.
ಎಂಎಸ್ಐಎಲ್ ತನ್ನ ಸರಬರಾಜುದಾರ ಮುಖೇನ ಅಗತ್ಯವಾದ ಯೂನಿಟ್ಗಳನ್ನು ಉತ್ಪಾದಿಸಲಿದೆ. ಗುಣಮಟ್ಟದ ನಿಯಂತ್ರಣಕ್ಕೆ ವ್ಯವಸ್ಥೆಗಳನ್ನು ನವೀಕರಿಸಲು ಅದರ ಅನುಭವ ಮತ್ತು ಜ್ಞಾನವನ್ನು ಬಳಸಿಕೊಳ್ಳಲಾಗುವುದು ಎಂದು ಹೇಳಿದೆ.
ಎಂಎಸ್ಐಎಲ್ ತನ್ನ ವಾಹನ ಬಿಡಿಭಾಗಗಳ ಪೂರೈಕೆದಾರರನ್ನು ಬಳಸಿಕೊಂಡು ಅಗತ್ಯಪ್ರಮಾಣದಷ್ಟು ವೆಂಟಿಲೇಟರ್‌ಗಳ ಬಿಡಿಭಾಗಗಳನ್ನ ತಯಾರಿಸುವ ವ್ಯವಸ್ಥೆ ಮಾಡುತ್ತಿದೆ. ಆಟೊಮೊಬೈಲ್ ಕ್ಷೇತ್ರದ ದಿಗ್ಗಜ ಎನಿಸಿರುವ ಈ ಕಂಪನಿ, ತನ್ನ ಅನುಭವದ ಮೂಲಕ ಗುಣಮಟ್ಟಕ್ಕೆ ರಾಜಿಯಾಗದಂತೆ ಉತ್ಪಾದನೆ ಹೆಚ್ಚಳ ಮಾಡುವ ಅಂಶಕ್ಕೆ ಗಮನ ಕೊಡಲಿದೆ.
ಎಂಎಸ್ಐಎಲ್ ಹಾಗೂ ಅಶೋಕ್ ಕಪೂರ್ ಅವರ ಜಂಟಿ ವಹಿವಾಟನ ಭಾಗವಾಗಿರುವ ಕೃಷ್ಣ ಮಾರುತಿ ಲಿಮಿಟೆಡ್ ಸಂಸ್ಥೆ, 3-ಪ್ಲೈ ಮುಖಗವಸುಗಳನ್ನು ತಯಾರಿಸಲಿದೆ. ಕೇಂದ್ರ ಹಾಗೂ ಹರಿಯಾಣ ಸರ್ಕಾರಗಳು ಅಂಗೀಕಾರ ನೀಡಿದ ಬಳಿಕ ಉತ್ಪಾದನೆ ಕಾರ್ಯ ಶುರುವಾಗಲಿದೆ. ಅಶೋಕ್ ಕಪೂರ್ ಅವರು 2 ಮಿಲಿಯನ್‌ನಷ್ಟು ಮುಖಗವಸುಗಳನ್ನು ಉಚಿತವಾಗಿ ನೀಡಲಿದ್ದಾರೆ ಎಂದು ಹೇಳಿದೆ.