ನವದೆಹಲಿ : ಭಾರತೀಯ ಟೆಲಿಕಾಂ ನಿಯಂತ್ರಣ ಪ್ರಾಧಿಕಾರದ (ಟ್ರಾಯ್) ಅಂಕಿಅಂಶಗಳ ಪ್ರಕಾರ, ರಿಲಯನ್ಸ್ ಜಿಯೋ ಮಾರ್ಚ್ ತಿಂಗಳಲ್ಲಿ 46.87 ಲಕ್ಷ ಗ್ರಾಹಕರಿಗೆ ಹೆಚ್ಚುವರಿಯಾಗಿ ಚಂದಾದಾರಿಕೆ ಹೊಂದಿದೆ.
ಇತರ ಎರಡು ಖಾಸಗಿ ಟೆಲಿಕಾಂ ಕಂಪನಿಗಳಾದ ಭಾರ್ತಿ ಏರ್ಟೆಲ್ ಮತ್ತು ವೊಡಾಫೋನ್-ಐಡಿಯಾ, ತಮ್ಮ ಚಂದಾದಾರರ ಸಂಖ್ಯೆಯನ್ನು ಕಳೆದುಕೊಂಡಿವೆ. ಮಾರ್ಚ್ ಅಂತ್ಯದ ವೇಳೆಗೆ ಭಾರ್ತಿ ಏರ್‌ಟೆಲ್‌ನ ಚಂದಾದಾರರ ಸಂಖ್ಯೆ 32.78 ಕೋಟಿಗೂ ಅಧಿಕವಾಗಿದ್ದು, 12.61ಲಕ್ಷದಷ್ಟು ಚಂದಾದಾರರು ಸೇವೆ ಸ್ಥಗಿತಗೊಳಿಸಿದ್ದಾರೆ. ವೊಡಾಫೋನ್-ಐಡಿಯಾ ಕೂಡ ಆ ತಿಂಗಳಲ್ಲಿ ಹೆಚ್ಚಿನ ಗ್ರಾಹಕರನ್ನು ಕಳೆದುಕೊಂಡಿದೆ. 63.53 ಲಕ್ಷ ಬಳಕೆದಾರರು ಕಂಪನಿಯಿಂದ ದೂರ ಸರಿದಿದ್ದಾರೆ. ಒಟ್ಟು ಚಂದಾದಾರರ ಸಂಖ್ಯೆ 31.91 ಕೋಟಿಗೆ ತಲುಪಿದೆ.
ಬಿಎಸ್ಎನ್ಎಲ್ ಮಾರ್ಚ್ನಲ್ಲಿ ಕೇವಲ 95,000 ಹೊಸ ಗ್ರಾಹಕರನ್ನು ಸೇರ್ಪಡೆ ಮಾಡಿಕೊಂಡಿದೆ. ಅದರ ಒಟ್ಟಾರೆ ಚಂದಾದಾರರು ಪ್ರಸ್ತುತ 11.97 ಕೋಟಿಯಷ್ಟಿದ್ದಾರೆ. ಒಟ್ಟಾರೆ ವೈರ್‌ಲೆಸ್ ಚಂದಾದಾರರು (2ಜಿ, 3ಜಿ ಮತ್ತು 4ಜಿ) 2020ರ ಫೆಬ್ರವರಿ ಅಂತ್ಯದ ವೇಳೆಗೆ 116.05 ಕೋಟಿಯಿಂದ ಮಾರ್ಚ್ ಅಂತ್ಯಕ್ಕೆ 117.57 ಕೋಟಿಗೆ ತಲುಪಿದೆ. ಇದರಿಂದಾಗಿ ಮಾಸಿಕ 0.24ರಷ್ಟು ಕುಸಿತದ ದರ ದಾಖಲಾಗಿದೆ ಎಂದು ಟ್ರಾಯ್ ಪ್ರಕಟಣೆಯಲ್ಲಿ ತಿಳಿಸಿದೆ.
ನಗರ ಪ್ರದೇಶಗಳಲ್ಲಿ ವೈರ್‌ಲೆಸ್ ಚಂದಾದಾರಿಕೆ 2020ರ ಫೆಬ್ರವರಿ ಅಂತ್ಯದ ವೇಳೆಗೆ 64.3 ಕೋಟಿಯಿಂದ ಮಾರ್ಚ್ ಅಂತ್ಯದ ವೇಳೆಗೆ 63.8 ಕೋಟಿಗೆ ಇಳಿದಿದೆ. ಆದರೆ, ಗ್ರಾಮೀಣ ಪ್ರದೇಶಗಳಲ್ಲಿ ಮಾರ್ಚ್ ಅಂತ್ಯದ ವೇಳೆಗೆ 51.7 ಕೋಟಿಯಿಂದ 51.92 ಕೋಟಿಗೆ ಏರಿದೆ ಎಂದು ಹೇಳಿದೆ.