ಕೋಲ್ಕತಾ: ಕೊರೊನಾ ವೈರಸ್ನ ಸಾಂಕ್ರಾಮಿಕ ರೋಗದಿಂದ ಬಳಲುತ್ತಿರುವ ಸಮಾಜದ ದುರ್ಬಲ ವರ್ಗದವರಿಗೆ ರಕ್ಷಣೆಗೆ ಐಟಿಸಿ 150 ಕೋಟಿ ರೂ.ಗಳ ಕೋವಿಡ್ ಆಕಸ್ಮಿಕ ನಿಧಿಯನ್ನು ಸ್ಥಾಪಿಸಿದೆ.
ಸಾಂಕ್ರಾಮಿಕ ರೋಗದಿಂದ ತೀವ್ರವಾಗಿ ಬಳಲುತ್ತಿರುವವರ ಮತ್ತು ಜೀವನೋಪಾಯಕ್ಕೂ ಪರದಾಡುತ್ತಿರುವ ಸಮಾಜದ ದುರ್ಬಲ ವರ್ಗದವರಿಗೆ ಈ ನಿಧಿಯನ್ನು ಬಳಸಿಕೊಳ್ಳಲಾಗುವುದು ಎಂದು ಕಂಪನಿಯು ಪ್ರಕಟಣೆಯಲ್ಲಿ ತಿಳಿಸಿದೆ.
ಸಮಾಜದ ಕೆಳ ವರ್ಗಗಳಿಗೆ ತಲುಪುವ ಜಿಲ್ಲಾ ಆರೋಗ್ಯ ಮತ್ತು ಗ್ರಾಮೀಣ ಆರೋಗ್ಯ ಪರಿಸರ ವ್ಯವಸ್ಥೆಗೆ ನೆರವು ನೀಡಲು ಈ ನಿಧಿಯು ಜಿಲ್ಲಾ ಪ್ರಾಧಿಕಾರಗಳೊಂದಿಗೆ ಸಹಕರಿಸಲಿದೆ.
ಲಾಕ್ಡೌನ್ ಸಮಯದಲ್ಲಿ ದೇಶಾದ್ಯಂತ ಔಷಧಗಳು, ದಿನಸಿ ವಸ್ತುಗಳು, ಇತರ ಅಗತ್ಯ ಸರಕುಗಳು, ಕೃಷಿ ಉತ್ಪನ್ನಗಳನ್ನು ತಲುಪಿಸಲು ಶ್ರಮಿಸುತ್ತಿರುವವರ ಕಾರ್ಯ ಶ್ಲಾಘನೀಯ. ಜನರ ಯೋಗಕ್ಷೇಮಕ್ಕೆ ಈ ನಿಧಿಯ ಅಡಿಯಲ್ಲಿ ಸಂಪನ್ಮೂಲಗಳನ್ನು ನೀಡಲಾಗುವುದು. ಸೋಂಕಿತರ ಚಿಕಿತ್ಸೆಯ ಮುಂಚೂಣಿಯಲ್ಲಿ ಇರುವವರಿಗೆ ವೈಯಕ್ತಿಕ ರಕ್ಷಣೆ ಹಾಗೂ ನೈರ್ಮಲ್ಯದ ಉತ್ಪನ್ನಗಳನ್ನು ಒದಗಿಸುತ್ತೇವೆ ಎಂದು ಹೇಳಿದೆ.
ಜಗತ್ತು ಮತ್ತು ಭಾರತ ಕೋವಿಡ್19 ಸೋಂಕಿನ ಭೀತಿಯನ್ನು ಎದುರಿಸುತ್ತಿದೆ. ನಾವು ಈ ಪರಿಸ್ಥಿತಿಯ ಮಧ್ಯದಲ್ಲಿ ಸಿಲುಕಿದ್ದೇವೆ. ಕಾರ್ಪೊರೇಟ್ ನಾಗರಿಕರಾದ ನಾವು ಈ ಸಾಂಕ್ರಾಮಿಕ ರೋಗವನ್ನು ತಡೆಗಟ್ಟಲು ನಾವೂ ಅರ್ಥಪೂರ್ಣವಾದ ಬೆಂಬಲವ ನೀಡಬೇಕಿದೆ ಎಂದು ಐಟಿಸಿ ಹೇಳಿದೆ.