ನವದೆಹಲಿ: ಫೋರ್ಬ್ಸ್ ಹೊರಡಿಸಿದ ಜಗತ್ತಿನ 'ಉತ್ತಮವಾಗಿ ಪರಿಗಣಿಸಲ್ಪಟ್ಟ' (ಬೆಸ್ಟ್ ರಿಗಾರ್ಡೆಡ್) ಅಗ್ರ ಕಂಪನಿಗಳ ಶ್ರೇಣಿಯಲ್ಲಿ ಬೆಂಗಳೂರು ಮೂಲದ ಇನ್ಪೋಸಿಸ್ 3ನೇ ಸ್ಥಾನ ಪಡೆದಿದೆ.
ಭಾರತದ ಇನ್ಫೋಸಿಸ್, ಟಿಸಿಎಸ್ ಮತ್ತು ಟಾಟಾ ಮೋಟಾರ್ಸ್ ವಿಶ್ವದ ಅತ್ಯುತ್ತಮ ಟಾಪ್ ಕಂಪನಿಗಳಲ್ಲಿ ಸ್ಥಾನ ಪಡೆದಿವೆ. ಪಾವತಿ ತಂತ್ರಜ್ಞಾನದ ಪ್ರಮುಖ ಕಂಪನಿ 'ವೀಸಾ' ಮತ್ತು ಇಟಾಲಿಯನ್ ಮೂಲದ ಕಾರು ತಯಾರಕಾ ಕಂಪನಿ 'ಫೆರಾರಿ' ಕ್ರಮವಾಗಿ 1 ಮತ್ತು 2 ನೇ ಸ್ಥಾನದಲ್ಲಿವೆ. ಇವುಗಳ ಬಳಿಕ ಇನ್ಫೋಸಿಸ್ 3ನೇ ಸ್ಥಾನದಲ್ಲಿದೆ ಎಂದು ಫೋರ್ಬ್ಸ್ ತಿಳಿಸಿದೆ.
ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್ (ಟಿಸಿಎಸ್) 22ನೇ ಸ್ಥಾನದಲ್ಲಿದ್ದರೆ, ಟಾಟಾ ಮೋಟಾರ್ಸ್ 31ನೇ ಸ್ಥಾನದ ಮೂಲಕ ಅಗ್ರ 50 ಕಂಪನಿಗಳ ಸಾಲಿನಲ್ಲಿವೆ. ವಿಶ್ವಾಸಾರ್ಹತೆ, ಸಾಮಾಜಿಕ ನಡವಳಿಕೆ, ಉತ್ಪನ್ನ ಮತ್ತು ಸೇವೆಗಳ ಸಾಮರ್ಥ್ಯ ಹಾಗೂ ಅಲ್ಲಿನ ಉದ್ಯೋಗಿಗಳ ಕಾರ್ಯನಿರ್ವಹಣೆ ಆಧಾರದ ಮೇಲೆ 250 ಕಂಪನಿಗಳನ್ನು ಪಟ್ಟಿ ಮಾಡಲಾಗಿದೆ.
ದತ್ತಾಂಶ ಸಂಗ್ರಹಕ್ಕೆ ಸ್ಟ್ಯಾಟಿಸ್ಟಾ 50ಕ್ಕೂ ಹೆಚ್ಚು ದೇಶಗಳಿಂದ 15,000 ಸಂವಾದಿಗಳನ್ನು ಸಮೀಕ್ಷೆಗೆ ಒಳಪಡಿಸಿತು. 2018ರಲ್ಲಿ 31ನೇ ಸ್ಥಾನದಲ್ಲಿದ್ದ ಇನ್ಫೋಸಿಸ್ ಈ ವರ್ಷ 3ನೇ ಸ್ಥಾನಕ್ಕೆ ಲಗ್ಗೆಯಿಟ್ಟಿದೆ. ಏಷ್ಯಾನ್ ಇನೋವೇಷನ್ ಶ್ರೇಣಿಯಲ್ಲಿ ಸಹ ಪ್ರಥಮ ಸ್ಥಾನದಲ್ಲಿದೆ ಎಂದು ಫೋರ್ಬ್ಸ್ ತಿಳಿಸಿದೆ.
ಇನ್ಫೋಸಿಸ್ ಬಳಿಕ ನೆಟ್ಫ್ಲಿಕ್ಸ್, ಪೇಪಲ್, ವಾಲ್ಟ್ ಡಿಸ್ನಿ, ಟೊಯೋಟಾ ಮೋಟಾರ್ಸ್, ಮಾಸ್ಟರ್ಕಾರ್ಡ್ ಮತ್ತು ಕೋಸ್ಟಕೊ ಹೊಸೇಲ್ ಸಹ ಸ್ಥಾನ ಪಡೆದಿವೆ.