ಮುಂಬೈ: ನೊವೆಲ್ ಕೊರೊನಾ ವೈರಸ್ನ ಸಾಂಕ್ರಾಮಿಕ ರೋಗದಿಂದ ವಾಯುಯಾನ ಉದ್ಯಮ ಭಾರೀ ಪ್ರಮಾಣದಲ್ಲಿ ನಷ್ಟು ಅನುಭವಿಸಿದೆ. ಇದಕ್ಕೆ ಇಂಡಿಗೋ ಕೂಡ ಹೊರತಾಗಿಲ್ಲ. ಹೀಗಾಗಿ, ಸಂಸ್ಥೆಯ ಮೇಲೆ ಹಣಕಾಸಿನ ಹೊರೆ ತಗ್ಗಿಸಲು ಹಿರಿಯ ಸಿಬ್ಬಂದಿಯ ವೇತನ ಹಾಗೂ ತನ್ನ ಸಂಬಳದಲ್ಲಿ ಅತ್ಯಧಿಕ ಶೇ 25ರಷ್ಟು ಕಡಿತಗೊಳಿಸುವುದಾಗಿ ಇಂಡಿಗೋ ಸಿಇಒ ರೊನೊಜೊಯ್ ದತ್ತಾ ಘೋಷಿಸಿದ್ದಾರೆ.
ಆದಾಯದಲ್ಲಿ ತೀವ್ರ ಕುಸಿತದೊಂದಿಗೆ ವಿಮಾನಯಾನ ಉದ್ಯಮದ ಉಳಿವು ಈಗ ಅಪಾಯದಲ್ಲಿದೆ. ನಮ್ಮ ಹಣದ ಹರಿವಿನ ಬಗ್ಗೆ ನಾವು ಎಚ್ಚರಿಕೆಯಿಂದ ಗಮನ ಹರಿಸಬೇಕು. ಆದ್ದರಿಂದ ನಾವು ಹಣದಿಂದ ಹೊರಗುಳಿಯುವುದಿಲ್ಲ ಎಂದು ದತ್ತಾ ನೌಕರರಿಗೆ ನೀಡಿದ ಇಮೇಲ್ನಲ್ಲಿ ತಿಳಿಸಿದ್ದಾರೆ.
ಹೆಚ್ಚುತ್ತಿರುವ ಹಿಂಜರಿಕೆಯಿಂದಾಗಿ ನಾವು 2020ರ ಏಪ್ರಿಲ್ 1ರಿಂದ ಎ ಮತ್ತು ಬಿ ವಿಭಾಗ ಹೊರತುಪಡಿಸಿ ಎಲ್ಲ ಉದ್ಯೋಗಿಗಳ ವೇತನ ಕಡಿತ ಮಾಡಲಿದ್ದೇವೆ. ಎ ಮತ್ತು ಬಿ ವಿಭಾಗದಲ್ಲಿ ಕಡಿಮೆ ಸಂಬಳದ ಹೆಚ್ಚಿನವರು ಇದ್ದಾರೆ ಎಂದು ಸಿಇಒ ಹೇಳಿದ್ದಾರೆ.
ನಾನು ನನ್ನ ವೈಯಕ್ತಿಕ ಸಂಬಳದಲ್ಲಿ ಶೇ 25ರಷ್ಟು ಕಡಿತ ಮಾಡಿಕೊಳ್ಳಲಿದ್ದೇನೆ. ಹಿರಿಯ ಉಪಾಧ್ಯಕ್ಷರ ಹಾಗೂ ಉನ್ನತ ವಿಭಾಗದ ಸಿಬ್ಬಂದಿಯಲ್ಲಿ ಶೇ 20ರಷ್ಟು ಮತ್ತು ಕಾಕ್ಪಿಟ್ ಸಿಬ್ಬಂದಿಯ ಶೇ 15 ರಷ್ಟು, ಸಹಾಯಕ ಉಪಾಧ್ಯಕ್ಷರ, ಬ್ಯಾಂಡ್ ಡಿ ಸಿಬ್ಬಂದಿ ಶೇ 10ರಷ್ಟು ಜೊತೆಗೆ ಸಿ ಬ್ಯಾಂಡ್ನ ಶೇ 5ರಷ್ಟು ಸಂಬಳ ಇಳಿಕೆ ಆಗಲಿದೆ ಎಂದು ವಿವರಿಸಿದರು.
ಏರ್ ಇಂಡಿಯಾದಿಂದ ಶೇ 5ರಷ್ಟು ವೇತನ ಕಟ್
ಸರ್ಕಾರಿ ಸ್ವಾಮ್ಯದ ಏರ್ ಇಂಡಿಯಾ ಕೂಡ ಕೋವಿಡ್ 19 ಸಾಂಕ್ರಾಮಿಕ ರೋಗದಿಂದ ಉಂಟಾದ ಹಣಕಾಸಿನ ನಷ್ಟವನ್ನು ಸರಿದೂಗಿಸಲು ನೌಕರರ ವೇತನದಲ್ಲಿ ಶೇ 5ರಷ್ಟು ಕಡಿತಗೊಳಿಸುವುದಾಗಿ ಹೇಳಿದೆ. ಎಲ್ಲ ಅಂತಾರಾಷ್ಟ್ರೀಯ ವಿಮಾನ ಹಾರಾಟ ಸೇವೆಗಳನ್ನು ಸ್ಥಗಿತಗೊಳಿಸಿದೆ.