ನವದೆಹಲಿ: ಬಹಳ ಹಿಂದೆಯೇ 12 ಕೋಟಿ ರೂ.ಗೆ ಖರೀದಿಸಿದ ಔಷಧ ಕಂಪನಿಯನ್ನು ಈಗ ಅದರ ಮಾಲೀಕರು 2,000 ಕೋಟಿ ರೂ.ಗೆ ಮಾರಾಟ ಮಾಡುತ್ತಿದ್ದಾರೆ. ಮಾನಸಿಕ ಅಸ್ವಸ್ಥತೆ, ಎದೆಯುರಿ, ತಲೆ ಸುತ್ತು, ನೋವು ನಿವಾರಣೆ ಮತ್ತು ಆಲ್ಝೈಮರ್ ಚಿಕಿತ್ಸೆಯಲ್ಲಿ ಪರಿಣತಿ ಹೊಂದಿರುವ ಔಷಧ ಕಂಪನಿಯಾದ ಝೆಡ್ಸಿಎಲ್ ಕೆಮಿಕಲ್ಸ್‌ನ ಯಶಸ್ಸಿನ ಕಥೆ ಇದು.
ಪಾರಿಖ್ ಕುಟುಂಬವು 12 ವರ್ಷಗಳ ಹಿಂದೆ (2008ರಲ್ಲಿ) 12.5 ಕೋಟಿ ರೂ.ಗೆ ಝಂಡು ಫಾರ್ಮಾಸ್ಯುಟಿಕಲ್ಸ್‌ನಿಂದ ಝೆಡ್ಸಿಎಲ್ ಕೆಮಿಕಲ್ಸ್ ಖರೀದಿಸಿತ್ತು. ಕಂಪನಿಯು ಸಕ್ರಿಯ ಫಾರ್ಮಾ ಪದಾರ್ಥಗಳ (ಎಪಿಐ) ವ್ಯವಹಾರದಲ್ಲಿ ತೊಡಗಿಸಿಕೊಂಡಿತು. ಪ್ರಸ್ತುತ ಅಡ್ವೆಂಟ್ ಇಂಟರ್‌ನ್ಯಾಷನಲ್ ಎಂಬ ಅಂತಾರಾಷ್ಟ್ರೀಯ ಖಾಸಗಿ ಈಕ್ವಿಟಿ ಸಂಸ್ಥೆಯಿಂದ 2,000 ಕೋಟಿ ರೂ. ಖರೀದಿ ಆಫರ್ ಬಂದಿದ್ದು, ಕಳೆದ ತಿಂಗಳು ಕಂಪನಿ ಮಾರಾಟಕ್ಕೆ ಸಹಿ ಹಾಕಲಾಯಿತು.
ಪಾರಿಖ್ ಕುಟುಂಬಕ್ಕೆ 1,610 ಕೋಟಿ ರೂ. ನೀಡಲು ಅಡ್ವೆಂಟ್ ಒಪ್ಪಿಕೊಂಡಿದೆ. ಪಾರಿಖ್ ಕುಟುಂಬವು ಝೆಡ್ಸಿಎಲ್ ಅನ್ನು ಸಂಪೂರ್ಣವಾಗಿ ತೊರೆಯುತ್ತಿದೆ. ಮೋರ್ಗನ್ ಸ್ಟಾನ್ಲಿ ಪ್ರೈವೇಟ್ ಈಕ್ವಿಟಿ ಏಷ್ಯಾ (ಎಂಎಸ್‌ಪಿಇಎ) ತನ್ನ ಶೇ 20 ರಷ್ಟು ಪಾಲನ್ನು 390 ಕೋಟಿ ರೂ.ಗೆ ಮಾರಾಟ ಮಾಡಲು ಸಜ್ಜಾಗಿದೆ. ಕಂಪನಿಯು 2016ರಲ್ಲಿ 150 ಕೋಟಿ ರೂ.ಗೆ ಝೆಡ್ಸಿಎಲ್ ನಿಂದ ಪಾಲು ಪಡೆದುಕೊಂಡಿತ್ತು.
ಇದನ್ನೂ ಓದಿ: ಬೆಲೆ ಏರಿಕೆ ಭಾರಕ್ಕೆ ನೆಲಕಚ್ಚಿದ ತೈಲ ಬಳಕೆ: 5 ತಿಂಗಳ ಕನಿಷ್ಠ ಮಟ್ಟಕ್ಕೆ ಇಳಿಕೆ!
ಈಗ ಎಪಿಐ ಉದ್ಯಮಕ್ಕೆ ಬೇಡಿಕೆ ಬಂದಿಲ್ಲ. ಕಂಪನಿಯಿಂದ ಹೊರಬರಲು ಇದು ಸರಿಯಾದ ಸಮಯ ಎಂದು ನಾವು ಭಾವಿಸಿದ್ದೇವೆ. ನಾವು ಹೂಡಿಕೆಯ ಮೇಲೆ 160 ಪಟ್ಟು ಲಾಭದೊಂದಿಗೆ ಕಾರ್ಯತಂತ್ರದಿಂದ ಹೊರಬರುತ್ತಿದ್ದೇವೆ ಎಂದು ಝೆಡ್ಸಿಎಲ್ ಸ್ಥಾಪಕ ಮತ್ತು ಪ್ರವರ್ತಕ ನಿಹಾರ್ ಪಾರಿಖ್ ಹೇಳಿದ್ದಾರೆ.
ಝೆಡ್ಸಿಎಲ್ ಪ್ರಧಾನ ಕಚೇರಿ ಮುಂಬೈನಲ್ಲಿದ್ದು, ಅಮೆರಿಕದ ಎಫ್ಡಿಎ ಅನುಮೋದಿತ ಘಟಕವು ಗುಜರಾತ್ನ ಅಂಕಲೇಶ್ವರದಲ್ಲಿದೆ. ಕಂಪನಿಯು ಶೇ 100ರಷ್ಟು ರಫ್ತು ಅವಲಂಬಿಸಿದೆ. ಈ ಆದಾಯದ ಶೇ 90ರಷ್ಟು ಯುರೋಪ್ ಮತ್ತು ಉತ್ತರ ಅಮೆರಿಕದಿಂದ ಬಂದಿದೆ.