ನವದೆಹಲಿ: ಅಮ್ರಾಪಾಲಿ ಗ್ರೂಪ್ ಮನೆ ಖರೀದಿದಾರರ ಹಣವನ್ನು ಅಕ್ರಮವಾಗಿ ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಮತ್ತು ಅವರ ಪತ್ನಿ ಸಾಕ್ಷಿ ಧೋನಿ ಒಡೆತನದ ಕಂಪನಿಯಲ್ಲಿ ಹೂಡಿಕೆ ಮಾಡಿದೆ ಎಂಬುದನ್ನು ಎಫ್ಎಸ್ಎ ಸುಪ್ರೀಂಕೋರ್ಟ್‌ನ ಗಮನಕ್ಕೆ ತಂದಿದೆ.
ಹೂಡಿಕೆದಾರರಿಗೆ ಕೋಟ್ಯಂತರ ರೂ. ವಂಚಿಸಿದ ಆರೋಪದ ಹಿನ್ನೆಲ್ಲೆಯಲ್ಲಿ ರಿಯಲ್ ಎಸ್ಟೇಟ್ ಕಂಪನಿ ಆಮ್ರಪಾಲಿ ಗ್ರೂಪ್‌ನ ನೋಂದಣಿಯನ್ನು ಸುಪ್ರೀಂಕೋರ್ಟ್‌ನ ನ್ಯಾಯಮೂರ್ತಿ ಅರುಣ್ ಮಿಶ್ರಾ ಮತ್ತು ಯು.ಯು ಲಲಿತ್ ಅವರಿದ್ದ ನ್ಯಾಯಪೀಠ ರದ್ದುಗೊಳಿಸಿದೆ. ಇದರ ಬೆನ್ನಲ್ಲಿ ವಂಚನೆಯ ಹಣವನ್ನು ಧೋನಿ ಹಾಗೂ ಪತ್ನಿ ಸಾಕ್ಷಿ ಒಡೆತನದ ಕಂಪನಿಗಳನ್ನು ಬಳಸಿಕೊಂಡಿದ್ದನ್ನು ವಿಧಿವಿಜ್ಞಾನ ಲೆಕ್ಕ ಪರಿಶೋಧಕ (ಎಫ್ಎಸ್ಎ) ಅಧಿಕಾರಿಗಳು ಪತ್ತೆಹಚ್ಚಿದ್ದಾರೆ.
ಅಮ್ರಾಪಾಲಿ ಗ್ರೂಪ್ 2009ರಿಂದ 2015ರ ಅವಧಿಯಲ್ಲಿ ರಿತಿ ಸ್ಟೋರ್ಟ್ಸ್ ಮ್ಯಾನೆಜ್ಮೆಂಟ್ ಕಂಪನಿಗೆ ₹ 42.22 ಕೋಟಿ ವರ್ಗಾಯಿಸಿದೆ. ಇದರಲ್ಲಿ ₹ 6.52 ಕೋಟಿ ಮೊತ್ತವನ್ನು ಅಮ್ರಪಾಲಿ ಶಫೈರ್ ಡೆವೆಲಪರ್ಸ್ ಪಾವತಿಸಿದೆ ಎಂದು ವರದಿಯಲ್ಲಿ ಹೇಳಿದೆ.
ಈ ಒಪ್ಪಂದವು ಸರಳ ಕಾಗದದಲ್ಲಿದೆ ಮತ್ತು ಅಮ್ರಪಾಲಿ ಮತ್ತು ರಿತಿ ಸ್ಪೋರ್ಟ್ಸ್ ಮ್ಯಾನೇಜ್ಮೆಂಟ್ ಪ್ರೈವೇಟ್ ಲಿಮಿಟೆಡ್ ನಡುವೆ ಮಾತ್ರ ನಡೆದಿದೆ. ಈ ಒಪ್ಪಂದಕ್ಕೆ ಚೆನ್ನೈ ಸೂಪರ್ ಕಿಂಗ್ಸ್ ಪರವಾಗಿ ಯಾವುದೇ ಸಹಿ ಇಲ್ಲ ಎಂಬುದನ್ನು ನ್ಯಾಯಾಲಯ ಗಮನಿಸಿದೆ.
ಧೋನಿ ಮಾಲೀಕತ್ವದ ಅಮ್ರಾಪಾಲಿ ಮಾಹಿ ಡೆವೆಲಪರ್ಸ್ ಹಾಗೂ ರಿತಿ ಸ್ಪೋರ್ಟ್ಸ್ ಮ್ಯಾನೇಜ್ಮೆಂಟ್ ಕಂಪನಿಗಳಿಗೆ ಅಕ್ರಮವಾಗಿ ಹಣ ವರ್ಗಾವಣೆ ಮಾಡಿದೆ. ಇದೊಂದು ನಕಲಿ ಒಪ್ಪಂದ. ಈ ಹಣ ವಶಕ್ಕೆ ಪಡೆಯಬೇಕು ಎಂದು ವಿಧಿವಿಜ್ಞಾನ ಲೆಕ್ಕ ಪರಿಶೋಧಕ ಅಧಿಕಾರಿಗಳು ನ್ಯಾಯಾಲಯಕ್ಕೆ ಮನವಿ ಮಾಡಿದ್ದಾರೆ.