ನವದೆಹಲಿ: ಲಾಕ್ಡೌನ್ ಜಾರಿಯಿಂದ ಅಮೆಜಾನ್, ಫ್ಲಿಪ್‌ಕಾರ್ಟ್, ಗ್ರೋಫರ್ಸ್ ಸೇರಿದಂತೆ ಇತರೆ ಯಾವುದೇ ಇ-ಕಾಮರ್ಸ್ ಕಂಪನಿಗಳ ವಿತರಣಾ ಜಾಲಕ್ಕೆ ಸಮಸ್ಯೆ ಎದುರಾಗಿಲ್ಲ ಎಂದು ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವ ಪ್ರಕಾಶ್ ಜಾವಡೇಕರ್ ಅವರು ಸ್ಪಷ್ಟನೆ ನೀಡಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ವಿಧಿಸಿದ 21 ದಿನಗಳ ಲಾಕ್‌ಡೌನ್‌ನಿಂದಾಗಿ ಆನ್ಲೈನ್ ವಿತರಕರಿಗೆ ತೊಂದರೆ ಆಗಿದೆಯಾ ಎಂಬ ಮಾಧ್ಯಮಗಳ ಪ್ರಶ್ನೆಗೆ ಇಲ್ಲವೆಂದಿರುವ ಜಾವಡೇಕರ್, ಕೆಲವು ಪ್ರತ್ಯೇಕ ನಿದರ್ಶನಗಳು ಇರಬಹುದು. ಆದರೆ, ಇ-ಕಾಮರ್ಸ್ ಸಂಸ್ಥೆಗಳ ವಿತರಣೆಗಳು ಹಲವು ಜಿಲ್ಲೆಗಳಲ್ಲಿ ಈ ಮೊದಲಿನಂತೆಯೇ ನಡೆಯುತ್ತಿವೆ ಎಂದಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರು ದೂರದರ್ಶನ ಭಾಷಣದಲ್ಲಿ ಅಗತ್ಯ ವಸ್ತುಗಳ ವಿತರಣೆಯನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಒದಗಿಸುವ ಭರವಸೆ ನೀಡಿವೆ. ದೇಶದಲ್ಲಿ 700ಕ್ಕೂ ಹೆಚ್ಚು ಜಿಲ್ಲೆಗಳಿವೆ. ಅಡೆತಡೆಗಳು ಒಂದು ಅಥವಾ ಎರಡು ಜಿಲ್ಲೆಗಳಲ್ಲಿ ಸಂಭವಿಸಿರಬಹುದು.
ಕೆಲವು ಮಳಿಗೆಗಳು, ಕಿರಾಣಿ ಅಂಗಡಿಗಳು ತೆರೆದಿರುತ್ತವೆ. ಆತಂಕ ಪಡುವ ಅಗತ್ಯವಿಲ್ಲ ಎಂದು ಪ್ರಧಾನಿ ಈಗಾಗಲೇ ಹೇಳಿದ್ದಾರೆ. ಇಂದು ತೆರೆದ ಅಂಗಡಿಗಳು ನಾಳೆಯೂ ತೆರೆಯುತ್ತವೆ. ಸ್ಥಳೀಯ ಕಿರಾಣಿ ಅಂಗಡಿಗಳಿಗೆ ಭೇಟಿ ನೀಡಿದಾಗ ನಾಗರಿಕರು ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು ಎಂದು ಸಚಿವ ಜಾವಡೇಕರ್ ಮನವಿ ಮಾಡಿದರು.