ನವದೆಹಲಿ: ಕೊರೊನಾ ವೈರಸ್ ಭೀತಿಯಿಂದ ಲಾಕ್ಡೌನ್ ಬಳಿಕ ಉಂಟಾದ ಆರ್ಥಿಕ ಅಡೆಚಣೆ ಕಾರಣ ಏರ್ ಇಂಡಿಯಾದ ಶೇ.100ರಷ್ಟು ಪಾಲನ್ನು ಖರೀದಿಸಲು ಸಲ್ಲಿಸುವ ಬಿಡ್ ಗಡುವನ್ನು ಕೇಂದ್ರ ಸರ್ಕಾರ ಮತ್ತೆ ವಿಸ್ತರಿಸಿದೆ.
ಕೋವಿಡ್ ಸೋಂಕು ಜಾಗತಿಕವಾಗಿ ಆರ್ಥಿಕ ಚಟುವಟಿಕೆಯನ್ನು ಅಡ್ಡಿಪಡಿಸಿದ್ದರಿಂದ ಏರ್ ಇಂಡಿಯಾಕ್ಕೆ ಬಿಡ್ ನೀಡುವ ಗಡುವನ್ನು ಅಕ್ಟೋಬರ್ 30ರವರೆಗೆ ಸರ್ಕಾರ ಎರಡು ತಿಂಗಳು ವಿಸ್ತರಿಸಿದೆ.
ರಾಷ್ಟ್ರೀಯ ವಾಹಕದಲ್ಲಿ ತನ್ನ ಪಾಲು ಮಾರಾಟದ ಪ್ರಕ್ರಿಯೆಯನ್ನು ಜನವರಿ 27ರಂದು ಪ್ರಾರಂಭಿಸಲಾಯಿತು. ಬಿಡ್ ಸಲ್ಲಿಸಲು ಸರ್ಕಾರ ನೀಡಿದ ನಾಲ್ಕನೇ ವಿಸ್ತರಣೆಯಾಗಿದೆ.
ಹೂಡಿಕೆ ಮತ್ತು ಸಾರ್ವಜನಿಕ ಸ್ವತ್ತು ನಿರ್ವಹಣಾ ಇಲಾಖೆ (ಡಿಐಪಿಎಎಂ) ಅಧಿಸೂಚನೆಯಲ್ಲಿ ಐಬಿ (ಆಸಕ್ತ ಬಿಡ್ದಾರರ) ವಿನಂತಿಯ ಮೇರೆಗೆ ಮತ್ತು ಕೋವಿಡ್ -19ನಿಂದ ಉಂಟಾದ ಪರಿಸ್ಥಿತಿಗಳ ದೃಷ್ಟಿಯಿಂದ ಬದಲಾವಣೆ ಮಾಡಲಾಗಿದೆ ಎಂದು ತಿಳಿಸಿದೆ.
ಜನವರಿಯಲ್ಲಿ ಇಒಐ ಸಲ್ಲಿಸುವ ಬಿಡ್‌ಗಳ ಕೊನೆಯ ದಿನಾಂಕ ಮಾರ್ಚ್ 17ಕ್ಕೆ ಇರಿಸಲಾಗಿತ್ತು. ನಂತರ ಅದನ್ನು ಏಪ್ರಿಲ್ 30ಕ್ಕೆ ವಿಸ್ತರಿಸಲಾಯಿತು. ಮತ್ತೆ ಜೂನ್ 30 ರವರೆಗೆ ಈ ಬಳಿಕ ಆಗಸ್ಟ್ 31ರವರೆಗೆ ವಿಸ್ತರಿಸಲಾಯಿತು.
ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸಂಪುಟ ಇತ್ತೀಚೆಗೆ ವಿದೇಶಿ ನೇರ ಹೂಡಿಕೆ (ಎಫ್‌ಡಿಐ) ನೀತಿಗೆ ತಿದ್ದುಪಡಿ ತರಲು ಅನುಮೋದನೆ ನೀಡಿತ್ತು. ಏರ್ ಇಂಡಿಯಾದಲ್ಲಿ ಎನ್‌ಆರ್‌ಐಗಳು ಸ್ವಯಂಚಾಲಿತ ಮಾರ್ಗದಲ್ಲಿ ಶೇ 100ರ ವರೆಗಿನ ಎಫ್‌ಡಿಐಗಳನ್ನು ಅನುಮತಿಸುತ್ತದೆ.