ನವದೆಹಲಿ: ಲಾಕ್‌ಡೌನ್ ನಿರ್ಬಂಧ ಸಡಿಲಿಸಿ ಮತ್ತು ಆನ್‌ಲೈನ್ ವಿತರಣೆ ಪುನಾರಂಭಿಸಿದ ವಾರಗಳ ಬಳಿಕ ವಾಲ್‌ಮಾರ್ಟ್ ಒಡೆತನದ ಇ - ಕಾಮರ್ಸ್ ಸ್ಟೋರ್ ಫ್ಲಿಪ್ಕಾರ್ಟ್ಗೆ ಶೇ 90ರಷ್ಟು ಮಾರಾಟಗಾರರು ಮರಳಿದ್ದಾರೆ.
ಏಪ್ರಿಲ್-ಜೂನ್ ತಿಂಗಳ ಅವಧಿಯಲ್ಲಿ ಹೊಸ ಮಾರಾಟಗಾರರ ಸೈನ್ ಅಪ್‌ಗಳ ಪ್ರಮಾಣ ಶೇ 125ರಷ್ಟು ಹೆಚ್ಚಳವಾಗಿದೆ.
ದೇಶಾದ್ಯಂತ ಎಂಎಸ್‌ಎಂಇ ಮಾರಾಟಗಾರರು ಮಾಡಿದ ಬದಲಾವಣೆಯಿಂದಾಗಿ ಹೊಸ ಸೈನ್- ಅಪ್‌ಗಳ ಹೆಚ್ಚಳವಾಗಿವೆ. ಲಾಕ್‌ಡೌನ್ ವ್ಯಾಪಕ ಪೂರೈಕೆ ಸರಪಳಿಗೆ ಅಡ್ಡಿಪಡಿಸಿದ ನಂತರ ತಮ್ಮ ಮಾರಾಟ ತಂತ್ರವನ್ನು ಮರು ವಿನ್ಯಾಸ ಮಾಡಿಕೊಂಡಿದ್ದಾರೆ.
ಫ್ಲಿಪ್‌ಕಾರ್ಟ್‌ನಲ್ಲಿ ಸೈನ್ ಅಪ್ ಮತ್ತು ಆನ್‌ಲೈನ್ ವ್ಯವಹಾರಗಳಿಗೆ ತೆರೆದುಕೊಂಡ ಹೆಚ್ಚಿನ ಎಂಎಸ್‌ಎಂಇಗಳು ದೆಹಲಿ, ಉತ್ತರ ಪ್ರದೇಶ, ಮಹಾರಾಷ್ಟ್ರ, ಪಶ್ಚಿಮ ಬಂಗಾಳ ಮತ್ತು ತಮಿಳುನಾಡಿಗೆ ಸೇರಿವೆ.
ಅಗತ್ಯ ಉತ್ಪನ್ನ ವಿಭಾಗಗಳಾದ ಆಹಾರ ಮತ್ತು ಪೋಷಣೆ, ಮಹಿಳೆಯರ ಉಡುಪು, ವೈಯಕ್ತಿಕ ಆರೈಕೆ ಮತ್ತು ಗೃಹ ಉಪಯೋಗಿ ವಸ್ತುಗಳು ಸೇರಿದಂತೆ ಇತರ ಉತ್ಪನ್ನಗಳಿವೆ. ಬಿಕ್ಕಟ್ಟಿನ ಸಂದರ್ಭದಲ್ಲಿ ಎಂಎಸ್‌ಎಂಇಗಳಿಗೆ ನೆರವಾಗಲು ಫ್ಲಿಪ್‌ಕಾರ್ಟ್ ನಾನಾ ವಿವಿಧ ಯೋಜನೆಗಳನ್ನು ರೂಪಿಸಿತ್ತು. ಇದರಲ್ಲಿ ಮಾರಾಟಗಾರರು, ಅವರ ಕುಟುಂಬಸ್ಥರು ಮತ್ತು ಉದ್ಯೋಗಿಗಳನ್ನೂ ಒಳಗೊಂಡಂತೆ ಕೋವಿಡ್ -19ರ ಆರೋಗ್ಯ ವಿಮೆ ಯೋಜನೆಯೂ ಮುಖ್ಯವಾಗಿದೆ. ಪ್ರತಿ ವ್ಯಕ್ತಿಗೆ 369 ರೂ. ವಾರ್ಷಿಕ ಪ್ರೀಮಿಯಂನಿಂದ ₹ 50,000 ರಿಂದ, 3,00,000 ವರೆಗೆ ವಿಮಾ ವ್ಯಾಪ್ತಿ ಹೊಂದಿದೆ.