ನವದೆಹಲಿ: ಫೇಸ್‌ಬುಕ್ ದುರುಪಯೋಗದ ವಿವಾದದ ನಡುವೆಯೂ ಕಂಪನಿಯ ಭಾರತದ ಮುಖ್ಯಸ್ಥ ಅಜಿತ್ ಮೋಹನ್ ಅವರು ಸಂಸದೀಯ ಸಮಿತಿಯ ಮುಂದೆ ಇಂದು ಹಾಜರಾಗಿ, ಸೋಷಿಯಲ್ ಮೀಡಿಯಾ ಪ್ಲಾಟ್ಫಾರ್ಮ್ ದುರುಪಯೋಗದ ಬಗ್ಗೆ ಚರ್ಚಿಸಿದರು.
ಹಿರಿಯ ಕಾಂಗ್ರೆಸ್ ಮುಖಂಡ ಶಶಿ ತರೂರ್ ನೇತೃತ್ವದ ಮಾಹಿತಿ ತಂತ್ರಜ್ಞಾನದ ಸಂಸದೀಯ ಸ್ಥಾಯಿ ಸಮಿತಿಯು ಫೇಸ್‌ಬುಕ್‌ನ ಪ್ರತಿನಿಧಿಗಗಳಿಂದ ತಮ್ಮ ಅಭಿಪ್ರಾಯ ಕೇಳಲು ಆಹ್ವಾನಿಸಿತ್ತು. ನಾಗರಿಕರ ಹಕ್ಕುಗಳ ರಕ್ಷಣೆ ಮತ್ತು ಸಾಮಾಜಿಕ/ಆನ್‌ಲೈನ್ ಸುದ್ದಿ ಮಾಧ್ಯಮ ವೇದಿಕೆಗಳ ದುರುಪಯೋಗ ತಡೆಗಟ್ಟುವ ವಿಷಯ ಮತ್ತು ಮಹಿಳೆಯರಿಗೆ ವಿಶೇಷ ಒತ್ತು ನೀಡುವ ಉದ್ದೇಶದಿಂದ ಸಭೆ ಕರೆಯಲಾಗಿತ್ತು.
ಫೇಸ್‌ಬುಕ್ ಇಂಡಿಯಾದ ವ್ಯವಸ್ಥಾಪಕ ನಿರ್ದೇಶಕ ಮೋಹನ್ ಅವರು ಇಂದು ಮಧ್ಯಾಹ್ನ ಸಮಿತಿಯ ಮುಂದೆ ಹಾಜರಾಗಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಸಮಿತಿಯು ಇದೇ ವಿಷಯದ ಬಗ್ಗೆ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯದ ಪ್ರತಿನಿಧಿಗಳನ್ನು ಸಹ ಕರೆದಿದೆ.
ಸೋಷಿಯಲ್ ಮೀಡಿಯಾ ಪ್ಲಾಟ್ಫಾರ್ಮ್, ತನ್ನ ದ್ವೇಷ-ಭಾಷಣ ನಿಯಮಗಳನ್ನು ಬಿಜೆಪಿಯ ರಾಜಕಾರಣಿಗಳಿಗೆ ಅನ್ವಯಿಸುವುದನ್ನು ನಿರ್ಲಕ್ಷಿಸಿದೆ ಎಂದು ವಾಲ್ಸ್ಟ್ರೀಟ್ ಜರ್ನಲ್ನಲ್ಲಿ ಪ್ರಕಟವಾದ ವರದಿಯ ಬಗ್ಗೆ ಫೇಸ್‌ಬುಕ್‌ನಿಂದ ಸ್ಪಷ್ಟನೆ ಕೇಳಲು ಬಯಸುತ್ತೇವೆ ಎಂದು ತರೂರ್ ಕೇಳಿದ್ದರು. ಈ ವರದಿಯನ್ನು ಬಿಜೆಪಿ ಸಾರಾಸಗಟಾಗಿ ತಿರಸ್ಕರಿಸಿತ್ತು.
ಬಿಜೆಪಿ ಸಂಸದ ನಿಶಿಕಾಂತ್ ದುಬೆ ಅವರು ಕಾಂಗ್ರೆಸ್ ತಮ್ಮ ಪಕ್ಷದ ರಾಜಕೀಯ ಕಾರ್ಯಸೂಚಿಯನ್ನು ಮತ್ತಷ್ಟು ಬಲಪಡಿಸಲು ಸಮಿತಿಯ ವೇದಿಕೆಯನ್ನು ಬಳಸುತ್ತಿದ್ದಾರೆ ಎಂದು ಆರೋಪಿಸಿ, ಅವರನ್ನು ಅಧ್ಯಕ್ಷ ಸ್ಥಾನದಿಂದ ತೆಗೆದು ಹಾಕುವಂತೆ ಒತ್ತಾಯಿಸಿದ್ದರು.
ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಅವರು ಸೋಮವಾರ ಈ ವಿಷಯದ ಬಗ್ಗೆ ವಾಗ್ದಾಳಿ ನಡೆಸಿದ್ದರು. ಭಾರತದ ಪ್ರಜಾಪ್ರಭುತ್ವ ಮತ್ತು ಸಾಮಾಜಿಕ ಸಾಮರಸ್ಯದ ಮೇಲೆ ಅಂತಾರಾಷ್ಟ್ರೀಯ ಮಾಧ್ಯಮಗಳು, ಫೇಸ್‌ಬುಕ್ ಮತ್ತು ವಾಟ್ಸ್ಆ್ಯಪ್ನ ಅತಿಕ್ರಮಣ ಬಹಿರಂಗಪಡಿಸಿವೆ ಎಂದು ಆರೋಪಿಸಿದ್ದರು.
ಯಾವುದೇ ಒಬ್ಬ ವಿದೇಶಿ ಕಂಪನಿಯೂ ನಮ್ಮ ರಾಷ್ಟ್ರದ ವ್ಯವಹಾರಗಳಲ್ಲಿ ಹಸ್ತಕ್ಷೇಪ ಮಾಡಲು ಅನುಮತಿಸಲಾಗುವುದಿಲ್ಲ. ಅವರನ್ನು ತಕ್ಷಣವೇ ತನಿಖೆಗೆ ಒಳಪಡಿಸಬೇಕು. ತಪ್ಪಿತಸ್ಥರೆಂದು ಕಂಡು ಬಂದರೆ ಶಿಕ್ಷೆ ವಿಧಿಸಬೇಕು ಎಂದು ರಾಹುಲ್ ಗಾಂಧಿ ಟ್ವೀಟ್ ಮೂಲಕ ಆಗ್ರಹಿಸಿದ್ದರು.
ಪ್ರಧಾನ ಮಂತ್ರಿ ನರೇಂದ್ರ ಮೋದಿ ಸೇರಿದಂತೆ ಕೇಂದ್ರ ಸಂಪುಟದ ಹಿರಿಯ ಸಚಿವರನ್ನು ಸೋಷಿಯಲ್ ಮೀಡಿಯಾದಲ್ಲಿ ಅವಹೇಳನಕಾರಿಯಾಗಿ ನಿಂದಿಸುವ ಕೆಲಸವನ್ನು ತಮ್ಮ ಸಂಸ್ಥೆಯ ಹಿರಿಯ ಅಧಿಕಾರಿಗಳು ಮಾಡುತ್ತಿದ್ದಾರೆ ಎಂದು ಆರೋಪಿಸಿ ಫೇಸ್‌ಬುಕ್ ಸಿಇಒ ಮಾರ್ಕ್ ಝುಕರ್ ಬರ್ಗ್ ಅವರಿಗೆ ಕೇಂದ್ರ ಮಾಹಿತಿ ಮತ್ತು ತಂತ್ರಜ್ಞಾನ ಖಾತೆ ಸಚಿವ ರವಿಶಂಕರ್ ಪ್ರಸಾದ್ ಪತ್ರ ಬರೆದಿದ್ದರು.