ವಾಷಿಂಗ್ಟನ್: ಟೆಸ್ಲಾ ಮತ್ತು ಸ್ಪೇಸ್ ಎಕ್ಸ್ ಸಿಇಒ ಎಲೋನ್ ಮಸ್ಕ್ ವಿಶ್ವದ 3ನೇ ಅತಿದೊಡ್ಡ ಶ್ರೀಮಂತ ವ್ಯಕ್ತಿಯಾಗಿ ಹೊರಹೊಮ್ಮಿದ್ದಾರೆ.
ಎಲೋನ್ ಮಸ್ಕ್ ಅವರಿಗೆ ಕೋವಿಡ್-19 ಪರೀಕ್ಷೆಯಲ್ಲಿ ಸೋಂಕು ಇರುವುದು ದೃಢಪಟ್ಟಿತ್ತು. ಈ ಬಳಿಕ ಅವರ ರಾಕೆಟ್ ಕಂಪನಿಯು ನಾಲ್ಕು ಗಗನಯಾತ್ರಿಗಳನ್ನು ಹೊತ್ತು ಬಾಹ್ಯಾಕಾಶಕ್ಕೆ ಯಶಸ್ವಿಯಾಗಿ ಉಡಾವಣೆಗೊಂಡಿತು. ಸೋಮವಾರ ಅವರ ಎಲೆಕ್ಟ್ರಿಕ್ ಕಾರ್ ತಯಾರಿಕೆಯ ಟೆಸ್ಲಾ ಇಂಕ್ ಎಸ್ & ಪಿ 500 ಸೂಚ್ಯಂಕದಲ್ಲಿ ಸೇರಲು ಹೆಸರು ನೋಂದಾಯಿಸಿತು.
ಈ ಎಲ್ಲ ಬೆಳವಣಿಗೆಗಳ ನಡುವೆ 49 ವರ್ಷದ ಮಸ್ಕ್, ವಿಶ್ವದ ಮೂರನೇ ಅತ್ಯಂತ ಶ್ರೀಮಂತ ವ್ಯಕ್ತಿಯಾಗಿದ್ದಾರೆ. ಸೋಮವಾರದಂದು ಕೆಲವೇ ಗಂಟೆಗಳ ವಹಿವಾಟಿನಲ್ಲಿ ಟೆಸ್ಲಾ ಷೇರು ಮೌಲ್ಯ ಶೇ 15ರಷ್ಟು ಏರಿಕೆಯಾಗಿದೆ. ಮಾರ್ಕ್ ಜುಕರ್‌ಬರ್ಗ್ ಅವರನ್ನು ಮಸ್ಕ್ ಹಿಂದಿಕ್ಕೆ ಮೂರನೇ ಸ್ಥಾನಕ್ಕೆ ಲಗ್ಗೆ ಇಟ್ಟಿದ್ದಾರೆ.
ಬ್ಲೂಮ್‌ಬರ್ಗ್ ಬಿಲಿಯನೇರ್ಸ್ ಸೂಚ್ಯಂಕದ ಪ್ರಕಾರ, ಮಂಗಳವಾರ ಷೇರು ಮೌಲ್ಯ ಶೇ 8.2ರಷ್ಟು ಏರಿಕೆಯಾಗಿದ್ದು, ಮಸ್ಕ್ ಸಂಪತ್ತು 7.6 ಬಿಲಿಯನ್ ಡಾಲರ್ನಷ್ಟು ಹೆಚ್ಚಳವಾಗಿ 109.7 ಬಿಲಿಯನ್ ಡಾಲರ್ಗೆ ತಲುಪಿದೆ. ಈ ವರ್ಷದ ಒಟ್ಟಾರೆ ಸಂಪತ್ತು 82.2 ಬಿಲಿಯನ್ ಡಾಲರ್ನಷ್ಟು ಜಿಗಿದಿದೆ. ಟೆಸ್ಲಾ ಎಸ್ & ಪಿ 500ಯಲ್ಲಿ ಡಿಸೆಂಬರ್ನಲ್ಲಿ ಪ್ರವೇಶಿಸಲಿದೆ.
ಶನಿವಾರ ಮಸ್ಕ್ ಅವರು ಕೋವಿಡ್ -19 ಮಧ್ಯಮ ಲಕ್ಷಣಗಳನ್ನು ಹೊಂದಿದ್ದರು. ಸಣ್ಣ ಶೀತದ ಲಕ್ಷಣಗಳು ಹೊಂದಿರುವುದಾಗಿ ಟ್ವೀಟ್ ಮಾಡಿದ್ದರು. ಭಾನುವಾರ ಅವರಲ್ಲಿ ಯಾವುದೇ ಲಕ್ಷಣಗಳಿಲ್ಲ ಎಂದು ಟ್ವೀಟ್ ಮಾಡಿದ್ದಾರೆ. ಅದೇ ದಿನ, ನಾಲ್ಕು ಗಗನಯಾತ್ರಿಗಳನ್ನು ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ಮಸ್ಕ್‌ನ ಬಾಹ್ಯಾಕಾಶ ಪರಿಶೋಧನಾ ತಂತ್ರಜ್ಞಾನ ನಿಗಮವು ನಿರ್ಮಿಸಿದ ವಾಹನದಲ್ಲಿ ಕರೆದೊಯ್ಯುಲಾಯಿತು.