ನವದೆಹಲಿ: ಸರ್ಕಾರಿ ಸ್ವಾಮ್ಯದ ಭಾರತ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್‌ನಲ್ಲಿ (ಬಿಪಿಸಿಎಲ್) ತಾನು ಹೊಂದಿರುವ ಎಲ್ಲಾ ಷೇರುಗಳನ್ನು ಖಾಸಗಿಯವರಿಗೆ ಮಾರಾಟ ಮಾಡಲು ಕೇಂದ್ರ ಸರ್ಕಾರ ಈಗಾಗಲೇ ಸಿದ್ಧತೆ ನಡೆಸಿದ್ದು, ಬಿಪಿಸಿಎಲ್ ನೌಕರರಿಗೆ ವಿಆರ್ಎಸ್ ಯೋಜನೆ ನೀಡುತ್ತಿದೆ.
ಬಿಪಿಸಿಎಲ್ ಷೇರು ಖರೀದಿ ಆಸಕ್ತಿಗೆ (ಇಒಐ) ಬಿಡ್ ಸಲ್ಲಿಕೆಗೂ ಮುನ್ನ ಕೆಲವೇ ವಾರಗಳಲ್ಲಿ, ಕಂಪನಿಯು ತನ್ನ ಉದ್ಯೋಗಿಗಳಿಗೆ ಸ್ವಯಂಪ್ರೇರಿತ ನಿವೃತ್ತಿ ಯೋಜನೆ ನೀಡಲು ಮುಂದಾಗಿದೆ. ಶೇ 52.98ರಷ್ಟು ಷೇರು ಖರೀದಿ ಆಸಕ್ತಿ ಸಲ್ಲಿಸಲು ಜುಲೈ 31 ಕೊನೆಯ ಗಡುವಾಗಿದೆ. ಇದಕ್ಕೂ ಮುನ್ನ ಎರಡು ಬಾರಿ ಗುಡುವು ಮುಂದೂಡಲ್ಪಟ್ಟಿದೆ.
ಭಾರತ್ ಪೆಟ್ರೋಲಿಯಂ ಸ್ವಯಂಪ್ರೇರಿತ ನಿವೃತ್ತಿ ಯೋಜನೆ - 2020 ಜುಲೈ 23ರಂದು ಪ್ರಾರಂಭವಾಗಿದ್ದು, ಆಗಸ್ಟ್ 13ರಂದು ಮುಕ್ತಾಯಗೊಳ್ಳಲಿದೆ.
ನಾನಾ ವೈಯಕ್ತಿಕ ಕಾರಣಗಳಿಂದಾಗಿ ನಿಗಮದ ಸೇವೆಯಲ್ಲಿ ಮುಂದುವರಿಯುವ ಸ್ಥಿತಿಯಲ್ಲಿಲ್ಲದ ನೌಕರರನ್ನು ಸ್ವಯಂಪ್ರೇರಿತ ನಿವೃತ್ತಿ ಯೋಜನೆ (ವಿಆರ್ಎಸ್) ನೀಡಲು ನಿಗಮ ನಿರ್ಧರಿಸಿದೆ ಎಂದು ತನ್ನ ಉದ್ಯೋಗಿಗಳಿಗೆ ಪ್ರಕಟಣೆಯಲ್ಲಿ ತಿಳಿಸಿದೆ.
ವಿಆರ್ಎಸ್ ಅನ್ನು ಯೋಜನೆ ಆಯ್ದುಕೊಳ್ಳುವ ನೌಕರರು ಪೂರ್ಣಗೊಂಡ ಸೇವೆಯ ಎರಡು ತಿಂಗಳ ವೇತನಕ್ಕೆ ಅಥವಾ ಸ್ವಯಂಪ್ರೇರಿತ ನಿವೃತ್ತಿಯ ಸಮಯದಲ್ಲಿ ಮಾಸಿಕ ವೇತನಕ್ಕೆ ಸಮನಾದ ಪರಿಹಾರ ಪಾವತಿಯನ್ನು ಸ್ವೀಕರಿಸಲು ಅರ್ಹರಾಗಿರುತ್ತಾರೆ ಎಂದು ಹೇಳಿದೆ.