ನವದೆಹಲಿ: ಕೊರೊನಾ ವೈರಸ್ ಲಸಿಕೆಯ ಬೆಲೆ ನಿಗದಿಗೆ ಬಿಜೆಪಿ ಶಾಸಕರೊಬ್ಬರು ಸೀರಮ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾ (ಎಸ್‌ಐಐ) ಸಿಇಒ ಅದರ್ ಪೂನವಾಲಾ ಅವರ ವಿರುದ್ಧ ಆಕ್ರೋಶ ಹೊರಹಾಕಿದ್ದು, ಅವರನ್ನು ಡಕಾಯಿತರಿಗೆ ಹೋಲಿಸಿದ್ದಾರೆ.
ಖಾಸಗಿ ಆಸ್ಪತ್ರೆಗಳಿಗೆ ಕೋವಿಶೀಲ್ಡ್ ಸರಬರಾಜಿನ ಪ್ರತಿ ಡೋಸ್‌ಗೆ 600 ರೂ. ಮತ್ತು ರಾಜ್ಯ ಸರ್ಕಾರಗಳಿಗೆ ಪೂರೈಸುವ ಡೋಸ್‌ಗೆ 400 ರೂ. ಬೆಲೆಯನ್ನು ಸೀರಮ್ ಸಂಸ್ಥೆ ನಿಗದಿಪಡಿಸಿದೆ. ಇದನ್ನು ಗೋರಖ್‌ಪುರ ಶಾಸಕ ರಾಧಾ ಮೋಹನ್ ದಾಸ್ ಅಗ್ರವಾಲ್ ವಿರೋಧಿಸಿ, ಸಾಂಕ್ರಾಮಿಕ ರೋಗಗಳ ಕಾಯ್ದೆಯಡಿ ಕಂಪನಿಯನ್ನು ಸ್ವಾಧೀನಪಡಿಸಿಕೊಳ್ಳಲು ಸರ್ಕಾರವನ್ನು ಕೋರಿದ್ದಾರೆ.
ಅದರ್ ಪೂನವಾಲಾ ನೀವು ಡಕಾಯಿತರಿಗಿಂತ ಕೆಟ್ಟವರು. ಸಾಂಕ್ರಾಮಿಕ ಕಾಯ್ದೆಯಡಿ ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ, ಬಿಎಲ್ ಸಂತೋಷ್, ಡಾ. ಹರ್ಷವರ್ಧನ್ ಅವರು ನಿಮ್ಮ ಕಾರ್ಖಾನೆಯನ್ನು ಸ್ವಾಧೀನಪಡಿಸಿಕೊಳ್ಳಬೇಕು ಎಂದು ವೈದ್ಯರೂ ಆಗಿರುವ ಶಾಸಕರು ಹಿಂದಿಯಲ್ಲಿ ಟ್ವೀಟ್ ಮಾಡಿದ್ದಾರೆ.
ಸರಣಿ ಟ್ವೀಟ್‌ಗಳಲ್ಲಿ ಕೃಷಿ ವೆಚ್ಚಗಳು ಮತ್ತು ಬೆಲೆಗಳಿಗಾಗಿ ಸ್ವಾಮಿನಾಥನ್ ಆಯೋಗದ ಸೂತ್ರವನ್ನು ಅಗ್ರವಾಲ್ ಉಲ್ಲೇಖಿಸಿದ್ದಾರೆ.
8 ವರ್ಷಕ್ಕಿಂತ ಮೇಲ್ಪಟ್ಟ ಎಲ್ಲಾ ನಾಗರಿಕರಿಗೆ ಚುಚ್ಚುಮದ್ದನ್ನು ನೀಡುವುದನ್ನು ಕೇಂದ್ರ ಸರ್ಕಾರ ಘೋಷಿಸಿದೆ. ವಿಶ್ವದ ಅತಿದೊಡ್ಡ ಲಸಿಕೆ ತಯಾರಕ ಘಟಕ ಪುಣೆಯಲ್ಲಿದ್ದು, ಸೀರಮ್ ಇನ್‌ಸ್ಟಿಟ್ಯೂಟ್ ಅಸ್ಟ್ರಾಜೆನೆಕಾ ಹಾಗೂ ಕೋವಿಶೀಲ್ಡ್ ಲಸಿಕೆ ಉತ್ಪಾದಿಸಿತ್ತಿದ್ದು, ಪ್ರತಿ ಡೋಸ್ನ ಬೆಲೆ ನಿಗದಿಪಡಿಸಿದೆ.