ನವದೆಹಲಿ: ಆಕ್ಸಿಸ್ ಬ್ಯಾಂಕ್ ತನ್ನ ಹೊಸ ನೇಮಕಾತಿಯ ಭಾಗವಾಗಿ 'ಗಿಗ್-ಎ-ಆಪರ್ಚುನಿಟೀಸ್' ಅಡಿಯಲ್ಲಿ ಸುಮಾರು 1,000 ಉದ್ಯೋಗಿಗಳನ್ನು ನೇಮಿಸಿಕೊಳ್ಳುವ ಯೋಜನೆ ರೂಪಿಸಿದೆ.
ಬ್ಯಾಂಕ್‌ನ ಕೆಲಸ- ಕಾರ್ಯಗಳನ್ನು ಮನೆಯಿಂದಲೇ ಮಾಡಬಲ್ಲ ನುರಿತ ಪ್ರತಿಭಾನ್ವಿತರನ್ನು ನೇಮಕ ಮಾಡಿಕೊಳ್ಳಲಾಗುವುದು. ದೇಶದ ಎಲ್ಲೆಡೆಯಿಂದಲೂ ನೌಕರರನ್ನು ನೇಮಕ ಮಾಡಿಕೊಳ್ಳುವ ಉದ್ದೇಶದಿಂದ ಗಿಗ್-ಎ-ಆಪರ್ಚುನಿಟೀಸ್' ರೂಪಿಸಲಾಗಿದೆ ಎಂದು ಕಂಪನಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಈ ನೇಮಕ ಮಾದರಿಯು ಎರಡು ಕೆಲಸದ ಶೈಲಿ ಒಳಗೊಂಡಿದೆ. ಮೊದಲನೆಯದು ಪೂರ್ಣ ಸಮಯದ ಶಾಶ್ವತ ಕೆಲಸ ಮತ್ತು ಎರಡನೆಯದು ಯೋಜನೆ ಅವಧಿ ಆಧರಿಸಿದೆ ನೇಮಕ.
ಗಿಗ್ ದೊಡ್ಡ (ನಿಯಮಿತ) ಉದ್ಯೋಗಗಳಾಗಿ ಇರಬೇಕೆಂಬುದು ನಮ್ಮ ಆಲೋಚನೆ. ಸಾಮಾನ್ಯ ಉದ್ಯೋಗದಂತೆ ಅದನ್ನು ಪರಿಣಾಮಕಾರಿಯಾಗಿ ಮಾಡಲು ಬಯಸಿದ್ದೇವೆ. ಜನರು ಉದ್ಯೋಗದಲ್ಲಿ ತೃಪ್ತಿ ಹೊಂದಿರಬೇಕು. ತಮ್ಮ ಉದ್ಯೋಗದಿಂದ ಏನಾದರೂ ಕಲಿಯಬೇಕು. ಮುಂದಿನ ಒಂದು ವರ್ಷದಲ್ಲಿ ಈ ಮಾದರಿಯಲ್ಲಿ ಕೆಲಸ ಮಾಡಲು ಇಚ್ಛಿಸುವ 800-1,000 ಜನರನ್ನು ನೇಮಿಸಿಕೊಳ್ಳುತ್ತೇವೆ ಎಂದು ಆಕ್ಸಿಸ್ ಬ್ಯಾಂಕ್‌ನ ಕಾರ್ಯನಿರ್ವಾಹಕ ನಿರ್ದೇಶಕ (ಕಾರ್ಪೊರೇಟ್ ಸೆಂಟರ್) ರಾಜೇಶ್ ದಹಿಯಾ ಪಿಟಿಐಗೆ ತಿಳಿಸಿದ್ದಾರೆ.
ಮುಂಚಿನ ಮನಸ್ಥಿತಿಯಲ್ಲಿ ಕೆಲಸ ಮಾಡಲು ಕಚೇರಿಗೆ ಬರಬೇಕಿತ್ತು. ಆದರೆ ಈಗ ಕೆಲಸದ ವಾತಾವರಣ ಬದಲಾಗಿದೆ. ವರ್ಕ್ ಫ್ರಮ್ ಹೋಮ್ ಶೈಲಿಯು ಕೆಲಸದ ಸಂಬಂಧಿತ ಅನೇಕ ವಿಷಯಗಳನ್ನು ಬದಲಿಸಿದೆ. ಮನೆಯಿಂದ ಕೆಲಸ ಮಾಡುವ ಬಗ್ಗೆ ಜನರು ಈ ಮೊದಲು ಹಿಂಜರಿಯುತ್ತಿದ್ದರು. ಆದರೆ, ಈಗ ವರ್ಕ್ ಫ್ರಮ್ ಹೋಮ್ಗೆ ಹೊಂದಿಕೊಂಡಿದ್ದಾರೆ. ಇದು ತುಂಬಾ ಉತ್ಪಾದಕ ಮತ್ತು ಅತ್ಯಂತ ಪರಿಣಾಮಕಾರಿ ಎಂಬುದು ಸಾಬೀತಾಗಿದೆ. ದೇಶಾದ್ಯಂತದ ಯುವಕರು, ಅನುಭವಿ ಮಧ್ಯಮ ವರ್ಗದ ವೃತ್ತಿಪರರು ಮತ್ತು ಮಹಿಳೆಯರು ಸೇರಿದಂತೆ ಕೋಟ್ಯಾಂತರ ಪ್ರತಿಭೆಗಳು ಬ್ಯಾಂಕ್ ನೌಕರಿ ಹುಡುಕುತ್ತಿದ್ದಾರೆ ಎಂದು ಹೇಳಿದರು.
ನಮ್ಮ ವೆಬ್‌ಸೈಟ್‌ನಲ್ಲಿ ಈ ಉಪಕ್ರಮದಡಿಯಲ್ಲಿ ಅನೇಕ ಉದ್ಯೋಗ ನೇಮಕಾತಿ ನಿರ್ವಹಿಸಿದ್ದೇವೆ. ಪ್ರತಿಯೊಂದು ಕೆಲಸಕ್ಕೂ ಅನೇಕ ಜನರನ್ನು ಕರೆಯಿಸಿಕೊಳ್ಳುತ್ತೇವೆ. ಕಳೆದ 3-4 ದಿನಗಳಲ್ಲಿ ಭಾರತದಾದ್ಯಂತ 3,000ಕ್ಕೂ ಅಧಿಕ ಸಿವಿಗಳನ್ನು ಪರೀಕ್ಷಿಸಿದ್ದೇವೆ. ನೌಕರರ ಗುಣಮಟ್ಟದಲ್ಲಿ ರಾಜಿ ಮಾಡಿಕೊಳ್ಳಲು ಬಯಸುವುದಿಲ್ಲ ಎಂದು ದಹಿಯಾ ಹೇಳಿದರು.