ನವದೆಹಲಿ: ಇ- ಕಾಮರ್ಸ್ ದೈತ್ಯ ಅಮೆಜಾನ್, ಪರಿಸರ ಸ್ನೇಹಿ ಮತ್ತು ಸುಸ್ಥಿರ ಅಭಿವೃದ್ಧಿಯ ಭಾಗವಾಗಿ ಭಾರತದಲ್ಲಿ 2020ರ ವೇಳೆಗೆ ಒಂದು ಬಾರಿ ಬಳಸಿ ಎಸೆಯುವಂತಹ (ಸಿಂಗಲ್ ಯೂಸ್) ಪ್ಲಾಸ್ಟಿಕ್ ಬಳಕೆಯನ್ನು ಸ್ಥಗಿತಗೊಳಿಸುವುದಾಗಿ ಹೇಳಿದೆ.
ಪ್ರಧಾನಿ ನರೇಂದ್ರ ಮೋದಿ ಅವರು ಮಹಾತ್ಮ ಗಾಂಧೀಜಿಯವರ 150ನೇ ಜನ್ಮ ದಿನಾಚರಣೆಯ ಪ್ರಯುಕ್ತ ರೆಡಿಯೋ ಕಾರ್ಯಕ್ರಮ ಮನ್ ಕಿ ಬಾತ್ನಲ್ಲಿ ಮಾತನಾಡಿ, 'ಪರಿಸರ ಸಂರಕ್ಷಣೆಗೆ ಸಿಂಗಲ್ ಯೂಸ್ ಪ್ಲಾಸ್ಟಿಕ್ ಬಳಕೆಯನ್ನು ಕಡಿಮೆಗೊಳಿಸುವಂತೆ ರಾಷ್ಟ್ರದ ಜನತೆಗೆ ಕರೆ ನೀಡಿದ್ದರು'. ಅವರ ಕೋರಿಕೆಯ ಮೇರೆಗೆ ಅಮೆಜಾನ್ ಈ ಪ್ಲಾಸ್ಟಿಕ್ ಬಳಕೆಯನ್ನು ಕೈಬಿಡಲಿದೆ ಎಂದು ತಿಳಿಸಿದೆ.
ವಾಲ್ಮಾರ್ಟ್ ಒಡೆತನದ ಫ್ಲಿಪ್‌ಕಾರ್ಟ್ ವಿರುದ್ಧ ಇ-ಕಾಮರ್ಸ್ ಮಾರುಕಟ್ಟೆಯ ನಾಯಕತ್ವಕ್ಕಾಗಿ ಪರಸ್ಪರ ಪೈಪೋಟಿ ನಡೆಸುತ್ತಿರುವ ಅಮೆಜಾನ್, 'ತನ್ನ ಗೋದಾಮುಗಳಲ್ಲಿನ ಪ್ಯಾಕೇಜಿಂಗ್‌ನಲ್ಲಿ ಶೇ. 7ಕ್ಕಿಂತಲೂ ಕಡಿಮೆ ಪ್ರಮಾಣದ ಸಿಂಗಲ್ ಯೂಸ್ ಪ್ಲಾಸ್ಟಿಕ್ ಬಳಸುತ್ತಿರುವುದಾಗಿ' ಹೇಳಿದೆ.
ಅಮೆಜಾನ್ ಭಾರತದ ನಡೆಗೆ ಬದ್ಧವಾಗಿದೆ. ಪ್ಯಾಕೇಜಿಂಗ್ ವಸ್ತುಗಳ ಬಳಕೆಯನ್ನು ಉತ್ತಮಗೊಳಿಸುವ, ತ್ಯಾಜ್ಯವನ್ನು ಕಡಿಮೆ ಮಾಡುವ ಮತ್ತು ಪರಿಸರ ಸ್ನೇಹಿ ಪ್ಯಾಕೇಜಿಂಗ್ ವಿಧಾನ ಅನುಸರಿಸಲಾಗುವುದು. ಈಗಿನ ಪ್ಲಾಸ್ಟಿಕ್ ಬಳಕೆಯ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ತಂತ್ರಜ್ಞಾನದ ನೆರವು ಪಡೆದು ಸುಸ್ಥಿರವಾದ ಪೂರೈಕೆಯ ಸರಪಳಿಗೆ ಬೆಂಬಲವಾಗಿ ನಿಲ್ಲುವುದಾಗಿ ಅಮೆಜಾನ್ ಇಂಡಿಯಾದ ಉಪಾಧ್ಯಕ್ಷ ಅಖಿಲ್ ಸಕ್ಸೇನಾ ಹೇಳಿದರು.