ನವದೆಹಲಿ: ಹೊಂದಾಣಿಕೆಯ ಒಟ್ಟು ಆದಾಯದ (ಎಜಿಆರ್) ಬಾಕಿ ಮೊತ್ತ 50,000 ಕೋಟಿ ರೂ. ಜೊತೆಗೆ ಬಡ್ಡಿ ಮತ್ತು ದಂಡ ಒಳಗೊಂಡಿದೆ ಎಂದು ವೊಡಾಫೋನ್ ಐಡಿಯಾ ಸುಪ್ರೀಂಕೋರ್ಟ್‌ಗೆ ಗುರುವಾರ ತಿಳಿಸಿದೆ.
ಬಾಕಿ ಉಳಿಸಿಕೊಂಡ ಮೊತ್ತ ಪಾವತಿಸಲು ಟೆಲಿಕಾಂ ಕಂಪನಿ ಬಳಿ ಸಾಕಷ್ಟು ಹಣವಿಲ್ಲ. ಉದ್ಯೋಗಿಗಳಿಗೆ ಸಂಬಳ ಪಾವತಿ ಮತ್ತು ನಿತ್ಯದ ವೆಚ್ಚಗಳನ್ನು ಪೂರೈಸಲು ಸಾಧ್ಯವಾಗುತ್ತಿಲ್ಲ ಎಂದು ನ್ಯಾಯಾಲಯದ ಮುಂದು ಅಳಲು ತೋಡಿಕೊಂಡಿದೆ.
ವೊಡಾಫೋನ್-ಐಡಿಯಾ ಪರ ಹಿರಿಯ ವಕೀಲ ಮುಕುಲ್ ರೋಹಟಗಿ, ಒಟ್ಟು 50,000 ಕೋಟಿ ರೂ. ಎಜಿಆರ್ ಉಳಿದಿದೆ. ಕಂಪನಿಯ ಉದ್ಯೋಗಿಗಳಿಗೆ ವೇತನ ಪಾವತಿಸಲು ಮತ್ತು ಖರ್ಚುಗಳನ್ನು ಪೂರೈಸಲು ಸಹ ಸಾಕಷ್ಟು ಹಣವಿಲ್ಲ ಎಂದು ನ್ಯಾಯಮೂರ್ತಿಗಳಾದ ಅರುಣ್ ಮಿಶ್ರಾ, ಎಸ್.ಅಬ್ದುಲ್ ನಜೀರ್ ಮತ್ತು ಎಂ.ಆರ್.ಷಾ ಅವರಿದ್ದ ನ್ಯಾಯಪೀಠಕ್ಕೆ ತಿಳಿಸಿದರು.
ಟೆಲಿಕಾಂ ಕಂಪನಿ ಕೂಡ ಯಾವುದೇ ಬ್ಯಾಂಕ್ ಗ್ಯಾರಂಟಿ ನೀಡಲು ಸಾಧ್ಯವಿಲ್ಲ ಎಂದು ರೋಹಟಗಿ ನ್ಯಾಯಪೀಠದ ಮುಂದೆ ವಾದಿಸಿದರು. ಕೇಂದ್ರದ ಲೆಕ್ಕಾಚಾರದ ಪ್ರಕಾರ, ವೊಡಾಫೋನ್ ಐಡಿಯಾ ಸುಮಾರು 53,000 ಕೋಟಿ ರೂ. ಬಾಕಿ ಇರಿಸಿಕೊಂಡಿದೆ. ಇದರಲ್ಲಿ ಎಜಿಆರ್ ಪಾವತಿಸದಿದ್ದಕ್ಕಾಗಿ ಬಡ್ಡಿ ಮತ್ತು ದಂಡದ ಮೊತ್ತ ಸಹ ಒಳಗೊಂಡಿದೆ.
ಈ ವೇಳೆ ನ್ಯಾಯಾಲಯ ವೊಡಾಫೋನ್ ಸೇರಿದಂತೆ ಟೆಲಿಕಾಂ ಕಂಪನಿಗಳಿಗೆ ಎಜಿಆರ್ ಬಾಕಿಯನ್ನು ಹೇಗೆ ಸಲ್ಲಿಸುತ್ತೀರಿ ಎಂಬುದರ ಬಗ್ಗೆ ಐದು ದಿನಗಳ ಒಳಗೆ ಅಫಿಡವಿಟ್ ಸಲ್ಲಿಸುವಂತೆ ಸೂಚಿಸಿ, ವಿಚಾರಣೆಯನ್ನು ಜೂನ್ 18ಕ್ಕೆ ಮುಂದೂಡಿದೆ.
50,000 ಕೋಟಿ ರೂ. ಎಜಿಆರ್ ಬಾಕಿಗೆ ಬ್ಯಾಂಕ್ ಗ್ಯಾರಂಟಿ ನೀಡಲು ಸಾಧ್ಯವಿಲ್ಲ. ಆದರೆ ಸ್ಪೆಕ್ಟ್ರಮ್ ಮತ್ತು ಪರವಾನಗಿ ಭದ್ರತೆಯಾಗಿ ತೆಗೆದುಕೊಳ್ಳಬಹುದು ಎಂದು ವೊಡಾಫೋನ್ ಪರ ವಕೀಲರು ನ್ಯಾಯಪೀಠದ ಮುಂದೆ ಮನವರಿಕೆ ಮಾಡಿದರು.