ನವದೆಹಲಿ:ಬಳಕೆದಾರರ ಸಾಮಾಜಿಕ ಜಾಲತಾಣಗಳಲ್ಲಿನ ವೈಯಕ್ತಿಕ ಖಾತೆಗಳಿಗೆ ಆಧಾರ್ ಸಂಖ್ಯೆಗಳೊಂದಿಗೆ ಜೋಡಣೆ ಮಾಡುವ ಕೋರಿಕೆ ಸಂಬಂಧಿಸಿದ ಪ್ರಕರಣಗಳನ್ನು ವರ್ಗಾವಣೆ ಮಾಡುವಂತೆ ಫೇಸ್ಬುಕ್ ಇಂಕ್ ಸಲ್ಲಿಸಿದ್ದ ಮನವಿಗೆ ಸ್ಪಂದಿಸಿದ ಸುಪ್ರೀಂಕೋರ್ಟ್, ಗೂಗಲ್, ಟ್ವಿಟರ್, ಯೂಟ್ಯೂಬ್ ಸೇರಿದಂತೆ ಇತರೆ ಸೋಷಿಯಲ್ ಮೀಡಿಯಾಗಳಿಗೆ ಸೆಪ್ಟೆಂಬರ್ 13ರ ಒಳಗೆ ಪ್ರತಿಕ್ರಿಯೆ ನೀಡುವಂತೆ ಆದೇಶ ನೀಡಿದೆ.
ಸುಪ್ರೀಕೋರ್ಟ್ನ ನ್ಯಾಯಮೂರ್ತಿಗಳಾದ ದೀಪಕ್ ಗುಪ್ತಾ ಹಾಗೂ ಅನಿರುದ್ಧ ಬೋಸ್ ಅವರಿದ್ದ ನ್ಯಾಯಪೀಠವು ಈ ಆದೇಶ ಹೊರಡಿಸಿದ್ದು, ನೋಟಿಸ್ಗಳನ್ನು ಇಮೇಲ್ ಮುಖಾಂತರ ಕಳುಹಿಸುವಂತೆ ಸೂಚಿಸಿದ್ದಾರೆ. ಸೋಷಿಯಲ್ ಮೀಡಿಯಾ ಸಂಪರ್ಕಕ್ಕೆ ಸಂಬಂಧಿಸಿದ ಪ್ರಕರಣಗಳ ವಿಚಾರಣೆಯು ಮದ್ರಾಸ್ ಹೈಕೋರ್ಟ್ನಲ್ಲಿ ಬಾಕಿ ಇರುವುದರಿಂದ ಆಧಾರ್ನೊಂದಿಗೆ ಖಾತೆಗಳ ಜೋಡಣೆ ಮಾನ್ಯ ಮಾಡಲು ಆಗುವುದಿಲ್ಲ ಎಂದು ಪೀಠವು ತಿಳಿಸಿದೆ.
ಸುಳ್ಳು, ಅಶ್ಲೀಲ ಹಾಗೂ ಮಾನಹಾನಿ ವಿಷಯಗಳ ಪ್ರಸರಣವನ್ನು ದೇಶ ವಿರೋಧಿ ಮತ್ತು ಉಗ್ರರ ಸಂಪರ್ಕಗಳನ್ನು ಪರಿಶೀಲಿಸಲು ಬಳಕೆದಾರರ ಸೋಷಿಯಲ್ ಮೀಡಿಯಾ ಖಾತೆಗಳು ಆಧಾರ್ಗೆ ಜೋಡಣೆ ಅಗತ್ಯವಿದೆ ಎಂದು ತಮಿಳುನಾಡು ಸರ್ಕಾರ ಸುಪ್ರೀಂಕೋರ್ಟಗೆ ನಿನ್ನೆ (ಸೋಮವಾರ) ತಿಳಿಸಿತ್ತು.
ವಿಶಿಷ್ಟ ಗುರುತಿನ ಚೀಟಿಯ ಆಧಾರ್ ಸಂಖ್ಯೆ, ಬೆರಳಚ್ಚು ವಿಶಿಷ್ಟ ಗುರುತು ಹಂಚಿಕೆಯನ್ನು ಮಾಡುವುದರಿಂದ ಬಳಕೆದಾರರ ಗೌಪ್ಯತೆಯ ನಿಯಮ ಉಲ್ಲಂಘಿಸಿದಂತಾಗಲಿದೆ ಎಂದು ಫೇಸ್ಬುಕ್ ಇಂಕ್ ತಮಿಳುನಾಡಿನ ಆಪಾದನೆಗೆ ಪ್ರತ್ಯುತ್ತರ ನೀಡಿದೆ.