ನವದೆಹಲಿ: ಇಂಗ್ಲೆಂಡ್ ಮೂಲದ ವೊಡಾಫೋನ್ ದೂರವಾಣಿ ಸಂಸ್ಥೆಯ ವಹಿವಾಟು ಭಾರಿ ಕುಸಿತವಾಗಿದ್ದು, ಪರಿಣಾಮ ಭಾರತದಲ್ಲಿ ತನ್ನೆಲ್ಲಾ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸುವ ದಿನ ಸನಿಹವಾಗಿದೆ ಎನ್ನುವ ಸುದ್ದಿ ಹರಿದಾಡುತ್ತಿದೆ.
ಬುಧವಾರದ ವಹಿವಾಟಿನಲ್ಲಿ ವೊಡಾಫೋನ್-ಐಡಿಯ ಶೇ.4ರಷ್ಟು ಇಳಿಕೆ ಕಂಡಿದೆ. ಸತತ ನಷ್ಟದಲ್ಲಿರುವ ವೊಡಾಫೋನ್ಗೆ ಸದ್ಯದ ಕುಸಿತ ಭಾರಿ ಹಿನ್ನಡೆ ಉಂಟುಮಾಡಿದೆ. ಭಾರತ ತೊರೆಯುವ ಬಗ್ಗೆ ಇದೇ ವೇಳೆ ವೊಡಾಫೋನ್ ಸ್ಪಷ್ಟನೆ ನೀಡಿದೆ.
ಭಾರತದಲ್ಲಿ ವೊಡಾಫೋನ್ ಕಾರ್ಯಾಚರಣೆ ನಿಲ್ಲಿಸುವ ಬಗ್ಗೆ ಕಂಪೆನಿ ಚಿಂತನೆ ನಡೆಸಿದ್ದರೂ, ತಕ್ಷಣಕ್ಕೆ ದೇಶ ತೊರೆಯುವುದಿಲ್ಲ ಎಂದು ಸ್ವತಃ ಕಂಪೆನಿ ಸಿಇಒ ನಿಕ್ ರೀಡ್ ಸ್ಪಷ್ಪಪಡಿಸಿದ್ದಾರೆ. ವೊಡಾಫೋನ್ ಭಾರಿ ನಷ್ಟದಲ್ಲಿರುವ ಪರಿಣಾಮ ಸದ್ಯ ಕೇಂದ್ರ ಸರ್ಕಾರದ ಮೊರೆ ಹೋಗಿದೆ. ಕಂಪೆನಿ ವಹಿವಾಟನ್ನು ಮತ್ತೆ ಹಳಿಗೆ ತರಲು ಕೇಂದ್ರ ಸಹಕಾರ ನೀಡಬೇಕು ಎಂದಿದೆ.
ವೊಡಾಫೋನ್ ಭಾರತ ತೊರೆಯಲಿದೆ ಎನ್ನುವ ವಿಚಾರ ಬಳಕೆದಾರರನ್ನು ಚಿಂತೆಗೀಡು ಮಾಡಿದೆ. ಒಂದು ವೇಳೆ ವೊಡಾಫೋನ್ ಭಾರತದಲ್ಲಿ ಎಲ್ಲ ಕಾರ್ಯವನ್ನು ನಿಲ್ಲಿಸಿದರೂ ಬಳಕೆದಾರರಿಗೆ ಸದ್ಯಕ್ಕಂತೂ ಯಾವುದೇ ತೊಂದರೆ ಇಲ್ಲ ಎಂದು ಕಂಪೆನಿ ಸ್ಪಷ್ಟಪಡಿಸಿದೆ.
ವೊಡಾಫೋನ್ ಭಾರತ ತೊರೆದರೆ ಉಳಿದ ಬಳಕೆದಾರರಿಗೂ ಇದು ವ್ಯತಿರಿಕ್ತ ಪರಿಣಾಮ ಬೀರಲಿದೆ. ಸದ್ಯ ಮಾರುಕಟ್ಟೆಯಲ್ಲಿ ಹಿಡಿತ ಹೊಂದಿರುವ ಜಿಯೋ ಹಾಗೂ ಏರ್ಟೆಲ್ ಕಂಪೆನಿಗಳು ಮತ್ತಷ್ಟು ಬಲಗೊಳ್ಳಲಿವೆ. ಇದು ಬಳಕೆದಾರರ ಮೇಲೆ ಪ್ರತಿಕೂಲ ಪರಿಣಾಮ ಬೀರುವ ಸಾಧ್ಯತೆಯೇ ಹೆಚ್ಚು ಎನ್ನುವುದು ತಜ್ಞರ ಅಭಿಮತ.