ವಾಷಿಂಗ್ಟನ್, ಅಮೆರಿಕ : ಅಮೆರಿಕದಲ್ಲಿ ಕಾರ್ಯನಿರ್ವಹಿಸುತ್ತಿರುವ ನ್ಯಾಷನಲ್ ಬ್ಯಾಂಕ್ ಆಫ್ ಪಾಕಿಸ್ತಾನ್ಗೆ (ಎನ್‌ಬಿಪಿ) ಅಮೆರಿಕದ ಫೆಡರಲ್ ಅಧಿಕಾರಿಗಳು 55 ಮಿಲಿಯನ್ ಡಾಲರ್‌ಗಿಂತ ಹೆಚ್ಚಿನ ಹಣವನ್ನು ದಂಡ ವಿಧಿಸಿದ್ದಾರೆ. ಅಕ್ರಮ ಹಣ ವರ್ಗಾವಣೆ ವಿರೋಧಿ ನೀತಿಯ ಉಲ್ಲಂಘನೆ ಮತ್ತು ಬ್ಯಾಂಕ್ನ ನಿಯಮಗಳನ್ನು ಪಾಲನೆ ಮಾಡದ ಕಾರಣದಿಂದಾಗಿ ದಂಡ ವಿಧಿಸಲಾಗಿದೆ.
55 ಮಿಲಿಯನ್ ಅಮೆರಿಕನ್ ಡಾಲರ್ ದಂಡದಲ್ಲಿ ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ 20.4 ಮಿಲಯನ್ ಅಮೆರಿಕನ್ ಡಾಲರ್ ದಂಡವನ್ನು ಫೆಡರಲ್ ರಿಸರ್ವ್ ಬೋರ್ಡ್ (ಎಫ್‌ಆರ್‌ಬಿ) ಗುರುವಾರ ವಿಧಿಸಿದೆ. ಉಳಿದ 35 ಮಿಲಿಯನ್ ಅಮೆರಿಕನ್ ಡಾಲರ್ ಅನ್ನು ಫೆಡರಲ್ ಕಾನೂನುಗಳು, ನಿಯಮಗಳು ಮತ್ತು ನಿಬಂಧನೆಗಳ ಅನುಸರಣೆ ಮಾಡದ ಕಾರಣಕ್ಕೆ ವಿಧಿಸಲಾಗಿದೆ ಎಂದು ತಿಳಿದು ಬಂದಿದೆ.
ನ್ಯಾಷನಲ್ ಬ್ಯಾಂಕ್ ಆಫ್ ಪಾಕಿಸ್ತಾನ ರಿಸ್ಕ್ ಮ್ಯಾನೇಜ್ಮೆಂಟ್ಗಾಗಿ ಕ್ರಮ ಕೈಗೊಂಡಿಲ್ಲ. ಅದರ ಜೊತೆಗೆ ಅಕ್ರಮ ಹಣ ವರ್ಗಾವಣೆ ತಡೆಯಲು ಸಾಕಷ್ಟು ನಿಯಂತ್ರಣ ಕ್ರಮಗಳನ್ನು ತೆಗೆದುಕೊಂಡಿಲ್ಲ. ಆದ್ದರಿಂದ ನ್ಯೂಯಾರ್ಕ್ ಸ್ಟೇಟ್ ಡಿಪಾರ್ಟ್ಮೆಂಟ್ ಆಫ್ ಫೈನಾನ್ಶಿಯಲ್ ಸರ್ವೀಸ್ ಜೊತೆಗೂಡಿ ಕ್ರಮಕೈಗೊಳ್ಳಲಾಗಿದೆ ಎಂದು ಫೆಡರಲ್ ರಿಸರ್ವ್ ಬೋರ್ಡ್ ಮಾಹಿತಿ ನೀಡಿದೆ.
ಇದನ್ನೂ ಓದಿ: Tata Motorsನ ಅಲ್ಟ್ರಾ ಟಿ-ಸೀರಿಸ್ ಟ್ರೇಡ್ ಮಾರ್ಕ್ ವಿರುದ್ಧ ಕೋರ್ಟ್ ಮೊರೆ ಹೋದ ಟಿ-ಸೀರಿಸ್ ಸಂಸ್ಥೆ
ನ್ಯೂಯಾರ್ಕ್ ಸ್ಟೇಟ್ ಡಿಪಾರ್ಟ್ಮೆಂಟ್ ಆಫ್ ಫೈನಾನ್ಶಿಯಲ್ ಸರ್ವೀಸಸ್ ಆದೇಶದ ಅನುಸಾರವಾಗಿ ನ್ಯಾಶನಲ್ ಬ್ಯಾಂಕ್ ಆಫ್ ಪಾಕಿಸ್ತಾನ್ ಮತ್ತು ಅದರ ನ್ಯೂಯಾರ್ಕ್ ಶಾಖೆಯು 35 ಮಿಲಿಯನ್ ಅಮೆರಿಕನ್ ಡಾಲರ್‌ನಷ್ಟು ದಂಡವನ್ನು ಪಾವತಿಸಲು ಒಪ್ಪಿಕೊಂಡಿವೆ ಎಂದು ಹಣಕಾಸು ಸೇವೆಗಳ ಅಧೀಕ್ಷಕ ಅಡ್ರಿನ್ ಎ. ಹ್ಯಾರಿಸ್ ಘೋಷಿಸಿದ್ದಾರೆ.
ನ್ಯಾಶನಲ್ ಬ್ಯಾಂಕ್ ಆಫ್ ಪಾಕಿಸ್ತಾನ್ ತನ್ನ ನ್ಯೂಯಾರ್ಕ್ ಶಾಖೆಗೆ ಅನೇಕ ಎಚ್ಚರಿಕೆಗಳನ್ನು ನೀಡಿದರೂ, ಬ್ಯಾಂಕ್ ಎಚ್ಚೆತ್ತುಕೊಳ್ಳಲಿಲ್ಲ. ಹಲವಾರು ವರ್ಷಗಳ ಕಾಲ ನಿಯಮಗಳನ್ನು ಉಲ್ಲಂಘಿಸಲಾಗಿದೆ. ಹಣಕಾಸಿನ ವಿಚಾರದಲ್ಲಿ ಪಾರದರ್ಶಕತೆ ಇರಬೇಕು. ಪಾರದರ್ಶಕತೆ ಇಲ್ಲದಿದ್ದರೆ, ಜಾಗತಿಕ ಹಣಕಾಸು ವ್ಯವಸ್ಥೆಯನ್ನು ರಕ್ಷಿಸಲು ಕ್ರಮ ಇಲಾಖೆ ಕ್ರಮ ಕೈಗೊಳ್ಳುತ್ತದೆ ಎಂದು ಫೆಡರಲ್ ರಿಸರ್ವ್ ಬೋರ್ಡ್ ಹೇಳಿದೆ.