ನವದೆಹಲಿ: ಭಾರತದ ಆಮದು ಮತ್ತು ರಫ್ತು ವಹಿವಾಟು ನಡುವಿನ ಅಂತರ ಅಲ್ಪ ಪ್ರಮಾಣದಲ್ಲಿ ಹಿಗ್ಗಿದೆ.
ಮೇ 2018 ಮತ್ತು 2019ರ ನಡುವಿನ ರಫ್ತು ಪ್ರಮಾಣದ ಬೆಳವಣಿಗೆ ಶೇ 3.63ರಷ್ಟು ಏರಿಕೆ ಆಗಿದೆ. ಇದೇ ಅವಧಿಯಲ್ಲಿ ಆಮದಿನ ಗಾತ್ರವು ಶೇ 3.27ರಲ್ಲಿ ಸಾಗಿದೆ. ಒಟ್ಟು ವಹಿವಾಟಿನ ಕೊರತೆ ಶೇ 2.59ರಷ್ಟಿದೆ ಎಂದು ಡಿಜಿಸಿಐ ವರದಿ ತಿಳಿಸಿದೆ.
ಮೇ 2018ರ ಅವಧಿಯಲ್ಲಿ ಭಾರತ ಸಾಗರೋತ್ತರವಾಗಿ ರಫ್ತು ಪ್ರಮಾಣ 28.94 ಬಿಲಿಯನ್ ಡಾಲರ್ನಷ್ಟಿತ್ತು (1.9 ಲಕ್ಷ ಕೋಟಿ ರೂ.). 2019ರ ಮೇ ವೇಳೆಯಲ್ಲಿ ಅದು 29.99 ಬಿಲಿಯನ್ ಡಾಲರ್ಗೆ ( 2.06 ಲಕ್ಷ ಕೋಟಿ ರೂ.) ತಲುಪಿದೆ. ಆದರೆ, 2019ರ ಮೇ ತಿಂಗಳ ವಹಿವಾಟಿನಲ್ಲಿ ಕುಸಿತ ಕಂಡುಬಂದಿದೆ.
2018ರ ಮೇಯಲ್ಲಿ ಆಮದು ಪ್ರಮಾಣ 43.92 ಬಿಲಿಯನ್ ಡಾಲರ್ (3.02 ಲಕ್ಷ ಕೋಟಿ ರೂ.) ಇದ್ದರೇ 2019ರ ಮೇ ತಿಂಗಳಲ್ಲಿ 45.35 ಡಾಲರ್ಗೆ ( 3.12 ಲಕ್ಷ ಕೋಟಿ ರೂ.) ತಲುಪಿದೆ ಎಂದು ವರದಿ ತಿಳಿಸಿದೆ.
2018ರ ಹಾಗೂ 2019ರ ಮೇ ತಿಂಗಳಲ್ಲಿ ವ್ಯಾಪಾರದ ಕೊರತೆಯ ಪ್ರಮಾಣ ಕ್ರಮವಾಗಿ -14.97 ಹಾಗೂ -15.36 ಬಿಲಿಯನ್ ಡಾಲರ್ಗಳಷ್ಟು ಉಂಟಾಗಿದೆ. ಆದರೆ, ವಾರ್ಷಿಕೆ ಬೆಳವಣಿಗೆಯು ಶೇ 2.59ರಲ್ಲಿ ಮುಂದುವರಿದಿದೆ.
ದಕ್ಷಿಣ ಕೊರಿಯಾ, ಜಪಾನ್, ಜರ್ಮನಿ, ಇರಾಕ್ ಮತ್ತು ಸೌದಿ ಅರೇಬಿಯಾ ಸೇರಿದಂತೆ 25 ಪ್ರಮುಖ ದೇಶಗಳೊಂದಿಗೆ ಕಳೆದ ಮೂರು ವರ್ಷಗಳಲ್ಲಿ ಭಾರತದ ವ್ಯಾಪಾರ ಕೊರತೆ, ಆಮದು ಮತ್ತು ರಫ್ತು ನಡುವಿನ ವ್ಯತ್ಯಾಸ ಹೆಚ್ಚಾಗಿದೆ ಎಂದು ವಾಣಿಜ್ಯ ಸಚಿವಾಲಯ ಲೋಕಸಭೆಯಲ್ಲಿ ತಿಳಿಸಿತ್ತು.
ಜಾಗತಿಕ ಮತ್ತು ದೇಶಿ ಅಂಶಗಳ ಬೇಡಿಕೆ ಮತ್ತು ಪೂರೈಕೆ, ಕರೆನ್ಸಿಯ ಏರಿಳಿತಗಳು, ಸಾಲದ ವೆಚ್ಚ ಮತ್ತು ಲಾಜಿಸ್ಟಿಕ್ಸ್ ಕಾರಣದಿಂದಾಗಿ ವಿವಿಧ ಸರಕುಗಳ ಆಮದು ಮತ್ತು ರಫ್ತುಗಳಲ್ಲಿನ ಸಾಪೇಕ್ಷ ಏರಿಳಿತಗಳ ಮೇಲೆ ವ್ಯಾಪಾರ ಕೊರತೆ ಅವಲಂಬಿತವಾಗಿರುತ್ತದೆ ಎಂದು ವಾಣಿಜ್ಯ ಸಚಿವ ಪಿಯೂಷ್ ಗೋಯಲ್ ಸ್ಪಷ್ಟನೆ ನೀಡಿದ್ದರು.