ಮುಂಬೈ: 'ಭಾರತೀಯ ರೈಲ್ವೆ ಎಂದಿಗೂ ಖಾಸಗೀಕರಣಗೊಳ್ಳುವುದಿಲ್ಲ' ಎಂದು ಕೇಂದ್ರ ರೈಲ್ವೆ ಸಚಿವ ಪಿಯೂಷ್ ಗೋಯಲ್ ಅವರು ಲೋಕಸಭೆಯಲ್ಲಿ ನೀಡಿದ್ದ ಭರವಸೆಯ ವಿಶ್ವಾಸಾರ್ಹತೆಯ ಬಗ್ಗೆ ಶಿವಸೇನೆ ಹಲವು ಪ್ರಶ್ನೆಗಳನ್ನು ಎತ್ತಿದೆ.
ರೈಲ್ವೆ ಸಚಿವ ಪಿಯೂಷ್ ಗೋಯಲ್ ಅವರು ಸಂಸತ್ತಿನಲ್ಲಿ ಮಾತನಾಡಿ, 'ರೈಲ್ವೆ ದೇಶದ ಆಸ್ತಿ. ಅದನ್ನು ಎಂದಿಗೂ ಖಾಸಗೀಕರಣಗೊಳಿಸುವುದಿಲ್ಲ.' ಎಂದಿದ್ದರು. ಅದೇ ಸಮಯದಲ್ಲಿ ಮತ್ತೊಬ್ಬ ಕೇಂದ್ರ ಸಚಿವ ಪ್ರಕಾಶ್ ಜಾವಡೇಕರ್ ಅವರು, 'ಜೀವ ವಿಮಾ ನಿಗಮವನ್ನು (ಎಲ್ಐಸಿ) ಖಾಸಗೀಕರಣಗೊಳಿಸುವುದಿಲ್ಲ' ಎಂದು ಭರವಸೆ ನೀಡಿದ್ದರು. ಸಚಿವರ ಈ ಹೇಳಿಕೆಗಳನ್ನು ಗುರಿಯಾಗಿಸಿಕೊಂಡ ಶಿವಸೇನಾ ಮುಖವಾಣಿ ಸಾಮ್ನಾ, 'ಕೇಂದ್ರದ ಈ ಇಬ್ಬರು ಸಚಿವರು ನೀಡಿದ್ದ ಆಶ್ವಾಸನೆಗಳನ್ನು ನಂಬಬಹುದಾದ ವಾತಾವರಣ ಇಂದು ದೇಶದಲ್ಲಿ ಇದೆಯೇ?' ಎಂದು ತನ್ನ ಸಂಪಾದಕೀಯದಲ್ಲಿ ಪ್ರಶ್ನಿಸಿದೆ.
ಇದನ್ನೂ ಓದಿ: ಏರ್ಬ್ಯಾಗ್ ಸಮಸ್ಯೆ: 9,000ಕ್ಕೂ ಅಧಿಕ ಕಾರು ಹಿಂಪಡೆಯಲಿದೆ ಟೊಯೋಟಾ.. ಇದ್ರಲ್ಲಿ ನಿಮ್ಮ ಕಾರೂ ಇದೆಯಾ?
ಪ್ರಧಾನಿ ನರೇಂದ್ರ ಮೋದಿ ಮತ್ತು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಗೋಯಲ್ ಅಥವಾ ಜಾವಡೇಕರ್ ಹೇಳಿಕೆಗಳಿಗೆ ವಿರುದ್ಧವಾಗಿಯೇ ಎಲ್ಲವನ್ನು ಮಾಡುತ್ತಿದ್ದಾರೆ. ದೇಶದ ಪ್ರಮುಖ ಬಂದರು ಮತ್ತು ವಿಮಾನ ನಿಲ್ದಾಣಗಳು ಮಾತ್ರವಲ್ಲದೆ ರಾಷ್ಟ್ರೀಕೃತ ಬ್ಯಾಂಕ್ಗಳೂ ಖಾಸಗೀಕರಣಗೊಳ್ಳಲು ಪ್ರಾರಂಭಿಸಿವೆ. ಮೋದಿ ಸರ್ಕಾರದ ಏಕೈಕ ನೀತಿಯೆಂದರೆ ಸಾರ್ವಜನಿಕ ವಲಯದ ಉದ್ಯಮಗಳನ್ನು ಹೂಡಿಕೆದಾರರಿಗೆ ಹಸ್ತಾಂತರಿಸುವುದು ಎಂದು ಸಾಮ್ನಾ ಆರೋಪಿಸಿದೆ.
ಕೇಂದ್ರದ ಖಾಸಗೀಕರಣ ಪರವಾದ ನೀತಿಗಳನ್ನು ಮತ್ತಷ್ಟು ಟೀಕಿಸಿದ ಸಂಪಾದಕೀಯ, ಮೋದಿ ಸರ್ಕಾರ ರಾಷ್ಟ್ರೀಯ ಆಸ್ತಿಗಳನ್ನು ಮಾರಾಟ ಮಾಡುತ್ತಿದೆ. ವಿಮಾನ ನಿಲ್ದಾಣಗಳು, ಬಂದರುಗಳು ಈಗ ಕೈಗಾರಿಕೋದ್ಯಮಿಗಳ ಪಾಲಾಗುತ್ತಿವೆ. ಆದ್ದರಿಂದ, ಸಚಿವರು ಎಷ್ಟೇ ಗಂಭೀರವಾಗಿ ಹೇಳಿದ್ದರೂ ಖಾಸಗೀಕರಣದ ಕತ್ತಿ ಇನ್ನೂ ರೈಲ್ವೆ ಮತ್ತು ವಿಮಾ ಕಂಪನಿಗಳ ಮೇಲೆ ತೂಗಾಡುತ್ತಿದೆ ಎಂದು ಸಂಪಾದಕೀಯದಲ್ಲಿ ಉಲ್ಲೇಖಿಸಿದೆ.
ಸರ್ಕಾರವು ವ್ಯವಹಾರಗಳನ್ನು ಮಾಡದಿದ್ದರೆ, ಸರ್ಕಾರವನ್ನು ನೀವೇಕೆ ನಡೆಸಬೇಕು, ಬಜೆಟ್ ಅನ್ನು ಏಕೆ ಮಂಡಿಸುತ್ತೀರಾ? ಕೈಗಾರಿಕೆ, ವ್ಯಾಪಾರ, ವಾಣಿಜ್ಯ ಸಚಿವಾಲಯಗಳಿಗೆ ಬೀಗ ಹಾಕಿ ಎಂದಿದೆ.