ಮುಂಬೈ: ಕಳೆದ ನಾಲ್ಕು ವಹಿವಾಟುಗಳಲ್ಲಿ ಏರುಗತಿಯಲ್ಲೇ ಸಾಗಿದ್ದ ಮುಂಬೈ ಷೇರುಪೇಟೆಯಲ್ಲಿಂದು ಗೂಳಿ ಓಟಕ್ಕೆ ಕರಡಿ ಅಡ್ಡಿಯಾಗಿದೆ.
ದಿನದ ಆರಂಭದಿಂದಲೂ ನಷ್ಟದಲ್ಲೇ ಸಾಗಿದ ಬಾಂಬೆ ಷೇರು ಮಾರುಕಟ್ಟೆ ಸೂಚ್ಯಂಕ ಸೆನ್ಸೆಕ್ಸ್ 621 ಅಂಕಗಳ ಕುಸಿತ ಕಂಡು 59,601.84ರಲ್ಲಿ ವಹಿವಾಟು ಅಂತ್ಯಗೊಳಿಸಿದೆ. ರಾಷ್ಟ್ರೀಯ ಸಂವೇದಿ ಸೂಚ್ಯಂಕ ನಿಫ್ಟಿ ಕೂಡ 179 ಅಂಕಗಳ ನಷ್ಟದ ಬಳಿಕ 17,745.90ರಲ್ಲಿ ತನ್ನ ವ್ಯಾಪಾರ ಮುಗಿಸಿತು.
ಹಣದುಬ್ಬರ ತಗ್ಗಿಸಲು ಯುಎಸ್ ಸೆಂಟ್ರಲ್ ಬ್ಯಾಂಕ್ ಬಡ್ಡಿದರಗಳನ್ನು ಹೆಚ್ಚಿಸಬಹುದು ಎಂಬ ನಿರೀಕ್ಷೆಯ ಬಳಿಕ ಜಗತ್ತಿನ ಷೇರು ಮಾರುಕಟ್ಟೆಗಳಲ್ಲಿ ಸೂಚ್ಯಂಕಗಳು ಕುಸಿದವು ಎಂದು ವ್ಯಾಪಾರಿಗಳು ತಿಳಿಸಿದ್ದಾರೆ.
ದಿನದ ವಹಿವಾಟಿನಲ್ಲಿ ಯಾರಿಗೆ ನಷ್ಟ?
ಟೆಕ್ ಮಹೀಂದ್ರಾ ಶೇಕಡಾ 2.5 ರಷ್ಟು ಕುಸಿತಗೊಳ್ಳುವ ಮೂಲಕ ನಷ್ಟ ಹೊಂದಿದ ಪ್ರಮುಖ ಸಂಸ್ಥೆಗಳ ಪೈಕಿ ಅಗ್ರಸ್ಥಾನದಲ್ಲಿತ್ತು. ಅಲ್ಟ್ರಾಟೆಕ್ ಸಿಮೆಂಟ್, ರಿಲಯನ್ಸ್ ಇಂಡಸ್ಟ್ರೀಸ್, ಹೆಚ್‌ಸಿಎಲ್ ಟೆಕ್, ಹೆಚ್‌ಡಿಎಫ್‌ಸಿ, ಕೋಟಕ್ ಬ್ಯಾಂಕ್, ಎಚ್‌ಡಿಎಫ್‌ಸಿ ಬ್ಯಾಂಕ್ ಮತ್ತು ಟಿಸಿಎಸ್ ನಂತರದ ಸ್ಥಾನದಲ್ಲಿದ್ದವು.
ಯಾರಿಗೆ ಲಾಭ?
ಇಂಡಸ್ ಇಂಡ್ ಬ್ಯಾಂಕ್, ಭಾರ್ತಿ ಏರ್‌ಟೆಲ್, ಮಾರುತಿ, ಟೈಟಾನ್ ಹಾಗೂ ಬಜಾಜ್ ಫೈನಾನ್ಸ್ ಲಾಭ ಗಳಿಸಿದವು.
ಏಷ್ಯಾದ ಷೇರುಕಟ್ಟೆಗಳ ಸಮಾಚಾರ:
ಏಷ್ಯಾದ ಇತರೆ ಮಾರುಕಟ್ಟೆಗಳಾದ ಶಾಂಘೈ, ಸಿಯೋಲ್ ಮತ್ತು ಟೋಕಿಯೋದಲ್ಲಿನ ಷೇರುಗಳು ಭಾರಿ ನಷ್ಟದೊಂದಿಗೆ ಕೊನೆಗೊಂಡವು. ಹಾಂಗ್‌ಕಾಂಗ್ ಷೇರುಪೇಟೆ ಮಾತ್ರ ಲಾಭದೊಂದಿಗೆ ವಹಿವಾಟು ಕೊನೆಗೊಳಿಸಿದೆ.
ಬ್ರೆಂಟ್ ಕಚ್ಚಾತೈಲ ಬೆಲೆ ಏರಿಕೆ
ಅಂತಾರಾಷ್ಟ್ರೀಯ ತೈಲ ಮಾನದಂಡ ಬ್ರೆಂಟ್ ಕಚ್ಚಾ ತೈಲವು ಪ್ರತಿ ಬ್ಯಾರೆಲ್‌ಗೆ ಶೇ.0.25 ರಷ್ಟು ಏರಿಕೆ ನಂತರ 81 ಡಾಲರ್‌ಗೆ ತಲುಪಿದೆ.
11 ಪೈಸೆ ಕುಸಿದ ರೂಪಾಯಿ ಮೌಲ್ಯ
ಮತ್ತೊಂದೆಡೆ, ಡಾಲರ್ ಎದುರು ರೂಪಾಯಿ ಮೌಲ್ಯ 11 ಪೈಸೆ ಇಳಿಕೆ ಕಂಡು 74.49 ರೂಪಾಯಿಯಲ್ಲಿ ವ್ಯಾಪಾರ ಮುಗಿಸಿದೆ.
ಇದನ್ನೂ ಓದಿ: ಎಲ್ಲಿ ಹೂಡಿಕೆ ಮಾಡಿದರೆ ಹೆಚ್ಚು ಆದಾಯ?.. ಡಿಜಿಟಲ್ ಗೋಲ್ಡ್ ಅಪಾಯಕಾರಿಯೇ?