ಮುಂಬೈ: ದಿನದ ಆರಂಭದಲ್ಲೇ ಮುಂಬೈ ಷೇರುಪೇಟೆಯಲ್ಲಿ ಸೆನ್ಸೆಕ್ಸ್ 500 ಅಂಕಗಳ ಜಿಗಿತ ಕಂಡು 58,282ರ ವಹಿವಾಟು ನಡೆಸಿದರೆ, ರಾಷ್ಟ್ರೀಯ ಸಂವೇದಿ ಸೂಚ್ಯಂಕ ನಿಫ್ಟಿ 122 ಅಂಕಗಳ ಏರಿಕೆಯೊಂದಿಗೆ 17,343ಕ್ಕೆ ಏರಿಕೆಯಾಗಿದೆ.
ಇನ್ಫೋಸಿಸ್ ಹೆಚ್ಚು ಲಾಭಗಳಿಸಿದ ಪ್ರಮುಖ ಕಂಪನಿಯಾಗಿದೆ. ಈ ಸಂಸ್ಥೆಯ ಷೇರುಗಳು ಶೇ.2 ರಷ್ಟು ಲಾಭಗಳಿಸಿದವು. ಬಜಾಜ್ ಫೈನಾನ್ಸ್, ಹೆಚ್‌ಸಿಎಲ್, ಟಾಟಾ ಸ್ಟೀಲ್, ಟೆಕ್ ಮಹೀಂದ್ರಾ ಹಾಗೂ ಎನ್‌ಟಿಪಿಸಿ ಲಾಭ ಗಳಿಸಿದ ಇತರೆ ಕಂಪನಿಗಳಾಗಿವೆ. ಮತ್ತೊಂದೆಡೆ ಮಾರುತಿ ಸುಜುಕಿ, ಸನ್ ಫಾರ್ಮಾ, ಹೆಚ್‌ಯುಎಲ್ ಹಾಗೂ ಐಟಿಸಿ ಷೇರುಗಳು ನಷ್ಟ ಅನುಭವಿಸಿದವು.
ಕಳೆದ ರಾತ್ರಿ ಅಮೆರಿಕ ಫೆಡರಲ್ ರಿಸರ್ವ್ ತನ್ನ ಆರ್ಥಿಕ ನೀತಿಯನ್ನು ವೇಗಗೊಳಿಸುವಿಕೆ ಹಾಗೂ ಏರುತ್ತಿರುವ ಹಣದುಬ್ಬರವನ್ನು ನಿಭಾಯಿಸಲು ಮುಂದಿನ ವರ್ಷ ಮೂರು ಬಾರಿ ಬಡ್ಡಿದರಗಳನ್ನು ಹೆಚ್ಚಿಸುವ ಸಾಧ್ಯತೆಯಿದೆ ಎಂದು ಹೇಳಿದೆ. ಈ ನಿರ್ಧಾರ ಜಾಗತಿಕ ಮಾರುಕಟ್ಟೆ ಮೇಲೆ ಪರಿಣಾಮ ಬೀರಿದೆ.
ಭಾರತದಲ್ಲಿ ಮಾರುಕಟ್ಟೆಗಳು ಕೆಲದಿನಗಳಿಂದ ಚಂಚಲತೆಯಲ್ಲಿವೆ. ಏಕೆಂದರೆ ಮಾರುಕಟ್ಟೆಯ ಅಲ್ಪಾವಧಿ ಷೇರುಗಳ ಮಾರಾಟವಾಗುತ್ತದೆ. ಈ ಪ್ರವೃತ್ತಿ ಇನ್ನೂ ಕೆಲವು ದಿನಗಳವರೆಗೆ ಮುಂದುವರಿಯಬಹುದು ಎಂದು ಜಿಯೋಜಿತ್ ಫೈನಾನ್ಷಿಯಲ್ ಸರ್ವೀಸಸ್‌ನ ಮುಖ್ಯ ಹೂಡಿಕೆ ತಂತ್ರಜ್ಞ ವಿ ಕೆ ವಿಜಯಕುಮಾರ್ ಹೇಳಿದ್ದಾರೆ.
ವಿದೇಶಿ ಸಾಂಸ್ಥಿಕ ಹೂಡಿಕೆದಾರರು (ಎಫ್‌ಐಐ) ಬಂಡವಾಳ ಮಾರುಕಟ್ಟೆಯಲ್ಲಿ ನಿವ್ವಳ ಮಾರಾಟಗಾರರಾಗಿ ಉಳಿದಿದ್ದು, ನಿನ್ನೆ ಒಂದೇ ದಿನ 3,407.04 ಕೋಟಿ ಮೌಲ್ಯದ ಷೇರುಗಳನ್ನು ಮಾರಾಟ ಮಾಡಿದ್ದಾರೆ.
ಏಷ್ಯಾದ ಇತರೆ ಮಾರುಕಟ್ಟೆಗಳಾದ ಶಾಂಘೈ, ಟೋಕಿಯೊ ಮತ್ತು ಸಿಯೋಲ್‌ನಲ್ಲಿನ ಷೇರುಗಳು ಲಾಭದೊಂದಿಗೆ ವಹಿವಾಟು ನಡೆಸುತ್ತಿದ್ದರೆ, ಹಾಂಗ್ ಕಾಂಗ್ ನಷ್ಟದಲ್ಲಿತ್ತು. ಅಂತಾರಾಷ್ಟ್ರೀಯ ತೈಲ ಮಾನದಂಡ ಬ್ರೆಂಟ್ ಕಚ್ಚಾ ತೈಲವು ಪ್ರತಿ ಬ್ಯಾರೆಲ್‌ಗೆ ಶೇ.0.88ರಷ್ಟು ಏರಿಕೆಯಾಗಿ 74.53 ಡಾಲರ್‌ಗೆ ತಲುಪಿದೆ. ಜಾಗತಿಕ ಮಾರುಕಟ್ಟೆಯಲ್ಲಿ ಡಾಲರ್ ಎದುರು ರೂಪಾಯಿ ಮೌಲ್ಯ 10 ಪೈಕೆ ಏರಿಕೆಯಾಗಿ 76.22ರಲ್ಲಿ ವ್ಯಾಪಾರ ನಡೆಸುತ್ತಿದೆ.
ಪ್ರಸ್ತುತ ಮುಂಬೈ ಷೇರುಪೇಟೆಯಲ್ಲಿ ಸೆನ್ಸೆಕ್ಸ್ 41 ಅಂಕ ಕುಸಿದು 57,810ರಲ್ಲಿದ್ದರೆ, ನಿಫ್ಟಿ 10 ಅಂಕಗಳ ನಷ್ಟದೊಂದಿಗೆ 17,228ರಲ್ಲಿ ವಹಿವಾಟು ನಡೆಸುತ್ತಿವೆ.
ಇದನ್ನೂ ಓದಿ: 1ರೂಪಾಯಿಗೆ 100 ಎಂಬಿ 4 ಜಿ ಡೇಟಾ.. ಜಿಯೋದಿಂದ ಮತ್ತೊಂದು ಹೊಸ ಕೊಡುಗೆ