ನವದೆಹಲಿ : ದೇಶ ಭ್ರಷ್ಟ ಉದ್ಯಮಿಗಳಾದ ವಿಜಯ್ ಮಲ್ಯ, ನೀರವ್ ಮೋದಿ ಮತ್ತು ಮೆಹುಲ್ ಚೋಕ್ಸಿ ಅವರ ಷೇರುಗಳ ಮಾರಾಟದಿಂದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್‌ಬಿಐ) ನೇತೃತ್ವದ ಒಕ್ಕೂಟವು ಮತ್ತೆ 792.11 ಕೋಟಿ ರೂಪಾಯಿಗಳನ್ನು ವಸೂಲಿ ಮಾಡಿದೆ ಎಂದು ಜಾರಿ ನಿರ್ದೇಶನಾಲಯ (ಇಡಿ) ಶುಕ್ರವಾರ ತಿಳಿಸಿದೆ.
ಇದರೊಂದಿಗೆ ವಿಜಯ್ ಮಲ್ಯ, ನೀರವ್ ಮೋದಿ ಮತ್ತು ಮೆಹುಲ್ ಚೋಕ್ಸಿ ಆಸ್ತಿಗಳ ಮಾರಾಟದಿಂದ ಒಟ್ಟು 13,109.17 ಕೋಟಿ ರೂಪಾಯಿಯನ್ನು ವಸೂಲಿ ಮಾಡಲಾಗಿದೆ ಎಂದು ಜಾರಿ ನಿರ್ದೇಶನಾಲಯ ಅಧಿಕೃತವಾಗಿ ಹೇಳಿಕೆಯಲ್ಲಿ ಮಾಹಿತಿ ನೀಡಿದೆ.
ಈಗ ಸ್ಥಗಿತಗೊಂಡಿರುವ ಕಿಂಗ್‌ಫಿಶರ್ ಏರ್‌ಲೈನ್ಸ್‌ನ ಮಾಲೀಕ ವಿಜಯ್ ಮಲ್ಯ ಸುಮಾರು 9 ಸಾವಿರ ಕೋಟಿ ರೂಪಾಯಿಗಳನ್ನು ಬ್ಯಾಂಕುಗಳಿಗೆ ಪಾವತಿ ಮಾಡಬೇಕಿತ್ತು. ಪಂಜಾಬ್ ನ್ಯಾಷನಲ್ ಬ್ಯಾಂಕ್ಗೆ ವಂಚನೆ ಪ್ರಕರಣದ ಆರೋಪಿಗಳಾದ ನೀರವ್ ಮೋದಿ ಮತ್ತು ಮೆಹುಲ್ ಚೋಕ್ಸಿ 13 ಸಾವಿರ ಕೋಟಿ ರೂಪಾಯಿ ಪಾವತಿಸಬೇಕಿತ್ತು. ಇದಕ್ಕೂ ಮೊದಲು ಎಸ್‌ಬಿಐ ನೇತೃತ್ವದ ಒಕ್ಕೂಟವು ಆಸ್ತಿಗಳನ್ನು ಹರಾಜು ಹಾಕುವ ಮೂಲಕ 7181.50 ಕೋಟಿ ರೂಪಾಯಿಯನ್ನು ವಸೂಲಿ ಮಾಡಿತ್ತು.
ಇದಕ್ಕೆ ಹೆಚ್ಚುವರಿಯಾಗಿ ನೀರವ್ ಮೋದಿ ವಿಚಾರದಲ್ಲಿ ಸುಮಾರು 1,060 ಕೋಟಿ ಮೌಲ್ಯದ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳಲ ಬ್ಯಾಂಕ್ಗಳಿಗೆ ಆರ್ಥಿಕ ಅಪರಾಧಗಳ ನ್ಯಾಯಾಲಯ ಅನುಮತಿ ನೀಡಿತ್ತು. ಜಾರಿ ನಿರ್ದೇಶನಾಲಯ 329.67 ಕೋಟಿ ರೂಪಾಯಿಯ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಂಡಿದೆ.
ಇದನ್ನೂ ಓದಿ:ಪ್ರಧಾನಿ ಭೇಟಿಯಾದ ಬಿಎಸ್ವೈ: ರಾಜ್ಯದ ಅಭಿವೃದ್ಧಿ ಕಾರ್ಯಗಳಿಗೆ ಒಪ್ಪಿಗೆ ನೀಡಲು ಮನವಿ
ಜುಲೈ 1ರಂದು ನೀರವ್ ಮೋದಿ ಸಹೋದರಿ ಪೂರ್ವಿ ತನ್ನ ವಿದೇಶಿ ಬ್ಯಾಂಕ್ ಖಾತೆಗಳಿಂದ ಸುಮಾರು 17.25 ಕೋಟಿ ರೂಪಾಯಿಯನ್ನು ಜಾರಿ ನಿರ್ದೆಶನಾಲಯಕ್ಕೆ ವರ್ಗಾವಣೆ ಮಾಡಿದ್ದರು.