ನವದೆಹಲಿ: ಚೀನಾದಿಂದ ಆಮದು ಮಾಡಿಕೊಳ್ಳುವುದನ್ನು ನಿಲ್ಲಿಸಲು ಕೈಗಾರಿಕೋದ್ಯಮಿಗಳ ಐಕ್ಯತೆಗೆ ಕರೆ ನೀಡಿದ ಜೆಎಸ್‌ಡಬ್ಲ್ಯೂ ಗ್ರೂಪ್ ಮಾಲೀಕ ಸಜ್ಜನ್ ಜಿಂದಾಲ್, 'ಎಲ್‌ಎಸಿಯಲ್ಲಿ ಭಾರತೀಯ ಸೈನಿಕರು ಹುತಾತ್ಮರಾದರು. ನಮ್ಮ ವ್ಯವಹಾರವು ಎಂದಿನಂತೆ ಮುಂದುವರೆಯಲು ಸಾಧ್ಯವಿಲ್ಲ' ಎಂದರು.
14 ಬಿಲಿಯನ್ ಡಾಲರ್ ಸಿಮೆಂಟ್ ವ್ಯವಹಾರ ನೋಡಿಕೊಳ್ಳುವ ಅವರ ಮಗ ಪಾರ್ತ್ ಜಿಂದಾಲ್, ಮುಂದಿನ 24 ತಿಂಗಳಲ್ಲಿ 400 ಮಿಲಿಯನ್ ಯುಎಸ್ ಡಾಲರ್ ಮೌಲ್ಯದ ವಾರ್ಷಿಕ ಆಮದನ್ನು ಚೀನಾದಿಂದ ನಿಲ್ಲಿಸುವುದಾಗಿ ಘೋಷಿಸಿದ್ದಾರೆ.
ಗಾಲ್ವಾನ್ ಕಣಿವೆಯಲ್ಲಿ ಇತ್ತೀಚೆಗೆ ನಡೆದ ಭಾರತೀಯ ಮತ್ತು ಚೀನಾ ಸೈನಿಕರ ನಡುವಿನ ಘರ್ಷಣೆ ಉಲ್ಲೇಖಿಸಿದ ಅವರು, ನಾವು ತೆಗೆದುಕೊಂಡ ಈ ಕ್ರಮವು ಚೀನಾ, ಭಾರತದ ನೆಲದಲ್ಲಿ ಮಾಡಿದ್ದರ ಪರಿಣಾಮವಾಗಿದೆ ಎಂದರು.
ನಮ್ಮ ಸೈನಿಕರು ಎಲ್‌ಎಸಿಯಲ್ಲಿ ಕೊಲ್ಲಲ್ಪಡುತ್ತಿರುವಾಗ ನಮ್ಮ ವ್ಯವಹಾರಕ್ಕಾಗಿ ಅಗ್ಗದ ಚೀನೀ ಕಚ್ಚಾ ವಸ್ತುಗಳನ್ನು ಖರೀದಿಸುವ ಮೂಲಕ ನಾವು ಹಣ ಸಂಪಾದಿಸಲು ಸಾಧ್ಯವಿಲ್ಲ ಎಂದು ಹೇಳಿದರು.
ದೇಶಿಯ ಉತ್ಪಾದಕರಿಗೆ ಗುಣಮಟ್ಟ ಹಾಗೂ ಪ್ರಮಾಣಿತ ಗುರಿ ತಲುಪಲು ನಾವೆಲ್ಲರೂ ಅವರಿಗೆ ಬೆಂಬಲವಾಗಿ ನಿಲ್ಲಬೇಕಿದೆ. ನಾವು ನಮ್ಮದೇ ಉತ್ಪನ್ನಗಳಿಗೆ ಪ್ರಾಮಾಣಿಕತೆಯನ್ನು ತೋರಬೇಕಿದೆ. ನಾವು ನಮ್ಮ ಸೈನಿಕರಿಗೆ ಬೆಂಬಲವಾಗಿ ನಿಂತು ಚೀನಾದ ವಿರುದ್ಧ ಹೋರಾಟ ಮಾಡಬೇಕಿದೆ ಎಂದು ಇಂಡಿಯಾ ಇಂಕಾಗೆ ಕರೆ ನೀಡಿದರು.