ನವದೆಹಲಿ: ಏಷ್ಯಾದ ಅತ್ಯಂತ ಶ್ರೀಮಂತರ ಪಟ್ಟಿಯಲ್ಲಿ ನಂಬರ್ ಒನ್ ಶ್ರೀಮಂತ ವ್ಯಕ್ತಿಯಾಗಿ ಹೊರಹೊಮ್ಮಿದ್ದ ರಿಲಯನ್ಸ್ ಇಂಡಸ್ಟ್ರೀಸ್ನ ಮುಖೇಶ್ ಅಂಬಾನಿ ಇದೀಗ ತಮ್ಮ ಸ್ಥಾನ ಕಳೆದುಕೊಂಡಿದ್ದಾರೆ.
ಮುಖೇಶ್ ಅಂಬಾನಿ ಅವರ ವ್ಯವಹಾರದ ಮೇಲೂ ಕೊರೊನಾ ವೈರಸ್ ಭಾರೀ ಪರಿಣಾಮ ಬೀರಿರುವ ಕಾರಣ ಅವರ ಷೇರುಗಳಲ್ಲಿ ದಿಢೀರ್ ಕುಸಿತ ಉಂಟಾಗಿದೆ. ಪರಿಣಾಮ ನಂಬರ್ 1 ಸ್ಥಾನ ಕಳೆದುಕೊಂಡಿದ್ದಾರೆ. ಏಷ್ಯಾದ ಅತ್ಯಂತ ಶ್ರೀಮಂತ ವ್ಯಕ್ತಿ ರಿಲಯನ್ಸ್ ಇಂಡಸ್ಟ್ರೀಸ್ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಮುಖೇಶ್ ಅಂಬಾನಿ 5.09 ಶತಕೋಟಿ ಡಾಲರ್ ನಷ್ಟ ಅನುಭವಿಸಿದ್ದಾರೆ.
ರಿಲಯನ್ಸ್ ಇಂಡಸ್ಟ್ರೀಸ್ ಚೇರ್ಮನ್ ಮುಖೇಶ್ ಅಂಬಾನಿ 58 ಬಿಲಿಯನ್ ಡಾಲರ್ ಆಸ್ತಿ ಹೊಂದುವ ಮೂಲಕ ಏಷ್ಯಾದ ಅತಿ ಶ್ರೀಮಂತ ವ್ಯಕ್ತಿ ಎಂಬ ಖ್ಯಾತಿಗೆ ಪಾತ್ರರಾಗಿದ್ದರು. ಇವರ ಬೆನ್ನಲ್ಲೇ ಅಲಿಬಾಬಾ ಕಂಪನಿಯ ಮುಖ್ಯಸ್ಥ ಜಾಕ್ ಮಾ 42.8 ಬಿಲಿಯನ್ ಡಾಲರ್ ಆಸ್ತಿ ಹೊಂದುವ ಮೂಲಕ 2ನೇ ಅತಿ ಶ್ರೀಮಂತ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದರು. ಆದರೆ ಇದೀಗ ಕೊರೊನಾ ಎಫೆಕ್ಟ್ ಜೋರಾಗಿ ಬೀಸಿರುವ ಕಾರಣ ನಂಬರ್ ಸ್ಥಾನಕ್ಕೆ ಆಲಿಬಾಬಾ ಕಂಪನಿ ಲಗ್ಗೆ ಹಾಕಿದ್ದು, 2ನೇ ಸ್ಥಾನದಲ್ಲಿ ಅಂಬಾನಿ ಮುಂದುವರಿದಿದ್ದಾರೆ. ಉಳಿದಂತೆ 3ನೇ ಸ್ಥಾನದಲ್ಲಿ ಟೆನ್ಸೆಂಟ್ ಹೋಲ್ಡಿಂಗ್ಸ್ನ ಮಾ ಹುವಾಟೆಂಗ್ ಇದ್ದಾರೆ.
ಕೊರೊನಾ ಎಫೆಕ್ಟ್ನಿಂದ ರಿಲಯನ್ಸ್ ಷೇರುಗಳಲ್ಲಿ ದಾಖಲೆಯ ಇಳಿಕೆ ಕಂಡು ಬಂದಿದ್ದು, ಕಳೆದ 10 ವರ್ಷಗಳಲ್ಲಿ ಮೊದಲ ಬಾರಿಗೆ ಶೇ. 11ರಷ್ಟು ಕಡಿತವಾಗಿದ್ದರಿಂದ ರಿಲಯನ್ಸ್ ನಷ್ಟ ಅನುಭವಿಸಿದೆ. ಈ ಹಿಂದೆ ನಂಬರ್ ಸ್ಥಾನದಲ್ಲಿದ್ದ ಅಲಿಬಾಬಾ ಕಂಪನಿಯ ಮುಖ್ಯಸ್ಥ ಜಾಕ್ ಮಾ ಹಿಂದಿಕ್ಕಿದ್ದ ಮುಖೇಶ್ ಅಂಬಾನಿ ನಂಬರ್ 1 ಸ್ಥಾನಕ್ಕೆ ಲಗ್ಗೆ ಹಾಕಿದ್ದರು.
ಏಷ್ಯಾದ ಅತಿ ಶ್ರೀಮಂತ ವ್ಯಕ್ತಿಯಾಗಿದ್ದ ಮುಖೇಶ್ ಅಂಬಾನಿ ಜಗತ್ತಿನ 12ನೇ ಶ್ರೀಮಂತ ಉದ್ಯಮಿ ಎಂಬ ಪಟ್ಟ ಕೂಡ ಅಲಂಕರಿಸಿದ್ದರು.